ರೈಡ್ ಟು ಮಿಡ್‍ಲ್ಯಾಂಡ್: ಕಾಪುವಿನಿಂದ ಹೊರಟ ಮೂವರು ಯುವಕರ ಬೈಕ್ ಸಾಹಸ ಯಾತ್ರೆ

Update: 2019-09-15 12:59 GMT

ಕಾಪು: ಕಾಪು ಮಲ್ಲಾರಿನ ವೃತ್ತಿಯಲ್ಲಿ ವಿಡಿಯೋಗ್ರಾಫರ್ ಆಗಿರುವ ಕಾಪು ಮಲ್ಲಾರಿನ ಸಚಿನ್ ಶೆಟ್ಟಿ ರೈಡ್ ಟು ಮಿಡ್‍ಲ್ಯಾಂಡ್ ಹೆಸರಿನಲ್ಲಿ ಮೂರನೇ ಬೈಕ್ ಸಾಹಸ ಯಾತ್ರೆಗೆ ಹೊರಟಿದ್ದಾರೆ. ಹೆಜಮಾಡಿಯ ದಿನೇಶ್ ಹಾಗೂ ಮೂಡುಬಿದಿರೆಯ ಯುವ ಛಾಯಾಚಿತ್ರಗ್ರಾಹಕ ರವಿ ಸಾಥ್ ನೀಡಿದ್ದಾರೆ. 

ರವಿವಾರ ಬೆಳಗ್ಗೆ ಕಾಪುವಿನ ಹೊಸಮಾರಿಗುಡಿಯಿಂದ ಸಾಹಸ ಯಾತ್ರೆಗೆ ಹೊರಟಿದ್ದು, ಸರ್ಕಲ್ ಇನ್ಸ್‍ಪೆಕ್ಟರ್ ಮಹೇಶ್ ಪ್ರಸಾದ್ ಸಾಹಸ ಯಾತ್ರೆಗೆ ಚಾಲನೆ ನೀಡಿದರು.

ಸಮಾಜ ಸೇವಕ ಲೀಲಾಧರ ಶೆಟ್ಟಿ, ಎಸ್‍ಕೆಪಿಐ ಸಹಕಾರಿ ಸಂಘದ ಜಿಲ್ಲಾಧ್ಯಕ್ಷ  ವಾಸುದೇವ ರಾವ್, ಕಾಪು ಎಸ್‍ಕೆಪಿಐ ವಲಯ ಅಧ್ಯಕ್ಷ ವೀರೇಂದ್ರ ಪೂಜಾರಿ, ಕಾರ್ಯದರ್ಶಿ ಸಚಿನ್ ಪೂಜಾರಿ, ಪುರಸಭಾ ಸದಸ್ಯ ಅನಿಲ್ ಕುಮಾರ್, ಕಾಪು ಪ್ರೆಸ್‍ಕ್ಲಬ್ ಕೋಶಾಧಿಕಾರಿ ಬಾಲಕೃಷ್ಣ ಪೂಜಾರಿ ಉಚ್ಚಿಲ ಶುಭಹಾರೈಸಿದರು.

2017ರಲ್ಲಿ ಏಕಾಂಗಿಯಾಗಿ ಕಾಶ್ಮೀರ ಟು ಕನ್ಯಾಕುಮಾರಿ 32 ದಿನಗಳ 13 ಸಾವಿರ ಕಿ.ಮೀ. ಗಳ ಲೈಟ್ಸ್ ಕ್ಯಾಮರಾ ಲಡಾಕ್, 2018ರಲ್ಲಿ ಸ್ನೇಹಿತ ಕಾಪು ಹಳೆ ಮಾರಿಗುಡಿ ಬಳಿ ನಿವಾಸಿ ಅಭಿಷೇಕ್ ಶೆಟ್ಟಿಯವರೊಂದಿಗೆ ಇಂಡಿಯಾ ಟು ಭೂತಾನ್ 40 ದಿನಗಳ 13,560 ಕಿಮೀ. ಗೋ ಹಿಮಾಲಯಾಸ್ ಬೈಕ್ ಸಾಹಸ ಯಾತ್ರೆ ಯಶಸ್ಸಿನ ಬಳಿಕ ಈ ಬಾರಿ ಇದು ಮೂರನೇ ಸಾಹಸ ಯಾತ್ರೆಯಾಗಿದೆ. 

ಈ ಯಾತ್ರೆ ಕಾಪುವಿನಿಂದ ಹೊರಟಿದ್ದು, 35 ದಿನಗಳ ಕಾಲ ನಡೆಯಲಿದೆ. ಸುಮಾರು 10 ಸಾವಿರ ಕಿ. ಮೀ ಕ್ರಮಿಸಲಿದ್ದು, 411 ಸಿಸಿ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕ್, ಮೂರು ಬೈಕ್‍ನಲ್ಲಿ ನಡೆಯಲಿದೆ. ಈ ಯಾತ್ರೆಗೆ ತಗಲುವ ಖರ್ಚು ಸುಮಾರು ರೂ. 3 ಲಕ್ಷ ವೆಚ್ಚವಾಗಿದೆ. ಪ್ರತಿದಿನ ಸುಮಾರು 14 ಗಂಟೆಗಳಲ್ಲಿ ಸುಮಾರು ಒಂದು ಸಾವಿರ ಕಿಮೀ ಕ್ರಮಿಸಲಿದ್ದೇವೆ. ಯಾತ್ರೆಯಲ್ಲಿ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಟೆಂಟ್ ಕೊಂಡೊಯ್ಯುತಿದ್ದಾರೆ. 

ದಿನೇಶ್ ಪಡುಬಿದ್ರಿಯಲ್ಲಿ ಸರ್ವೀಸ್ ಸ್ಟೇಷನ್ ನಡೆಸುತ್ತಿದ್ದು, ಅಂತರಾಜ್ಯ ಬೈಕ್‍ಯಾತ್ರೆಯಲ್ಲಿ ಯಶಸ್ಸು ಕಂಡಿದ್ದಾರೆ.
ತಾವು ತೆರಳುವ ಸ್ಥಳಗಳ ಜನಜೀವನ, ಸಂಸ್ಕೃತಿ, ಆಹಾರ ಪದ್ಧತಿ ಬಗ್ಗೆ ವೀಡಿಯೋ ದಾಖಲೀಕರಣ ಮಾಡಿ ಶಟರ್‍ಬಾಕ್ಸ್ ಫಿಲ್ಮ್ಸ್ ಹೆಸರಿನ ತಮ್ಮದೇ ಯೂಟ್ಯೂಬ್ ಚಾನಲ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತದೆ. ಯಾತ್ರೆಯುದ್ದಕ್ಕೂ ಸಂಚಾರ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸದುದ್ದೇಶವನ್ನೂ ಯಾತ್ರಿಗಳು ಈ ಬಾರಿ ಇರಿಸಿಕೊಂಡಿದ್ದಾರೆ. 

ಉಡುಪಿ, ಪುಣೆ, ಮುಂಬೈ, ವಡೋದರಾ, ಉದಯಪುರ, ಜೈಪುರ, ಕುರುಕ್ಷೇತ್ರ, ಜಿಭಿ, ಚಿತ್ಕುಲ್, ತಾಬೊ, ಮಡ್ ವಿಲೇಜ್, ಖಾಝ, ಚಂದ್ರತಾಲ್, ಮನಾಲಿ, ಚಂಡೀಗಡ, ಆಗ್ರಾ, ಇಂದೋರ್, ಔರಂಗಬಾದ್, ಸೋಲಾಪುರ, ಹಂಪಿ, ಬೆಂಗಳೂರು, ಮಡಿಕೇರಿ, ಮಂಗಳೂರು ಮೂಲಕ ಸಾಗಿ ಉಡುಪಿಯಲ್ಲಿ ಬೈಕ್ ಸಾಹಸಯಾತ್ರೆ ಮುಕ್ತಾಯವಾಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News