ನಕಲಿ ಗ್ರಾಹಕರ ಮೂಲಕ ಬ್ಯಾಂಕ್ ಗೆ 3.77 ಕೋಟಿ ರೂ. ವಂಚನೆಗೈದ !

Update: 2019-09-15 14:12 GMT

ಮುಂಬೈ,ಸೆ.15: ನಕಲಿ ಗ್ರಾಹಕರ ಮೂಲಕ ನಕಲಿ ಚಿನ್ನಾಭರಣಗಳನ್ನು ಅಡವಿರಿಸಿ ಸರಕಾರಿ ಸ್ವಾಮ್ಯದ ಇಂಡಿಯನ್ ಬ್ಯಾಂಕಿಗೆ 3.77 ಕೋ.ರೂ.ಗಳನ್ನು ವಂಚಿಸಿರುವ ಆರೋಪದಲ್ಲಿ ಬ್ಯಾಂಕಿನ ಚಿನ್ನ ಮೌಲ್ಯಮಾಪಕನನ್ನು ಪೊಲೀಸರು ಬಂಧಿಸಿದ್ದಾರೆ.

ಆ್ಯಂಟಪ್ ಹಿಲ್ ನಿವಾಸಿ ರಾಮಸ್ವಾಮಿ ನಾಡಾರ್ (43) ಬಂಧಿತ ಆರೋಪಿಯಾಗಿದ್ದಾನೆ. ಸ್ವಂತ ಚಿನ್ನಾಭರಣಗಳ ಅಂಗಡಿಯನ್ನು ಹೊಂದಿರುವ ಆತ ಜೊತೆಗೆ ಕಳೆದ ಎರಡು ವರ್ಷಗಳಿಂದ ಧಾರಾವಿಯ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಚಿನ್ನ ಮೌಲ್ಯಮಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದ.

ತನ್ನಲ್ಲಿ ಅಡವಿಟ್ಟಿರುವ ಚಿನ್ನಾಭರಣಗಳ ಪೈಕಿ ಕೆಲವನ್ನು ಹರಾಜು ಮಾಡಲು ನಿರ್ಧರಿಸಿದ್ದ ಬ್ಯಾಂಕು ಚಿನ್ನಾಭರಣಗಳ 77 ಪ್ಯಾಕೆಟ್‌ಗಳನ್ನಿರಿಸಿದ್ದ ಲಾಕರ್‌ನ್ನು ತೆರೆದಿತ್ತು. ಪರಿಶೀಲನೆಯ ವೇಳೆ ಚಿನ್ನಾಭರಣಗಳು ನಕಲಿ ಎನ್ನುವುದು ಪತ್ತೆಯಾಗಿತ್ತು. ಶಾಖಾ ವ್ಯವಸ್ಥಾಪಕರು ತಕ್ಷಣ ಧಾರಾವಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸರು ನಾಡಾರ್‌ನನ್ನು ವಿಚಾರಣೆಗೊಳಪಡಿಸಿದಾಗ ಬ್ಯಾಂಕಿಗೆ ವಂಚಿಸಿದ್ದನ್ನು ಆತ ಒಪ್ಪಿಕೊಂಡಿದ್ದಾನೆ. ದಾದರ್‌ನಿಂದ ನಕಲಿ ಚಿನ್ನಾಭರಣಗಳನ್ನು ಖರೀದಿಸಿದ್ದ ಆತ 12 ನಕಲಿ ಗ್ರಾಹಕರ ಮೂಲಕ ಅವುಗಳನ್ನು ಬ್ಯಾಂಕಿನಲ್ಲಿ ಅಡವಿರಿಸಿದ್ದ ಮತ್ತು ಅವು ಅಸಲಿ ಚಿನ್ನಾಭರಣಗಳು ಎಂದು ಪ್ರಮಾಣೀಕರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News