‘ಯಕ್ಷಗಾನ ಬೆಳೆಸುವ ಹೊಣೆ ಕಲಾಪ್ರೇಮಿಗಳದ್ದು’
ಮಂಗಳೂರು, ಸೆ.15: ಯುವ ಪೀಳಿಗೆಗೆ ಕಲೆ ಮತ್ತು ಸಂಸ್ಕೃತಿಯನ್ನು ಉಣಬಡಿಸಿದ್ದು ಯಕ್ಷಗಾನ. ಇಂತಹ ಯಕ್ಷಗಾನನ್ನು ಉಳಿಸಿ ಬೆಳೆಸುವ ಮಹತ್ತರ ಹೊಣೆ ಕಲಾಪ್ರೇಮಿಗಳ ಮೇಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದಾರೆ.
ಮಂಗಳೂರು ನಗರದ ಪುರಭವನದಲ್ಲಿ ಮಂಗಳೂರಿನ ಭ್ರಾಮರೀ ಯಕ್ಷಮಿತ್ರರಿಂದ 4ನೇ ವರ್ಷದ ಭ್ರಾಮರೀ ಯಕ್ಷ ವೈಭವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಕ್ಷಗಾನ ನಮ್ಮ ಕಲೆ, ಯಕ್ಷಗಾನವನ್ನು ಕರಾವಳಿ ಸೇರಿದಂತೆ ಎಲ್ಲ ಭಾಷಿಗರೂ ಒಪ್ಪಿಕೊಂಡಿದ್ದಾರೆ. ಸಾಮಾಜಿಕ ಹಾಗೂ ಧಾರ್ಮಿಕ ಸಂದೇಶ ಯಕ್ಷಗಾನದಲ್ಲಿ ಇದೆ. ಇಂತಹ ಯಕ್ಷಗಾನ ಈಗ ವಿಶ್ವಮಾನ್ಯವಾಗುತ್ತಿದೆ ಎಂದರು.
ಪಾರೆಕೋಡಿಗೆ ಭ್ರಾಮರೀ ಪ್ರಶಸ್ತಿ: ಇದೇ ಸಂದರ್ಭ ಯಕ್ಷಗಾನ ಭಾಗವತ ಪಾರೆಕೋಡಿ ಗಣಪತಿ ಭಟ್ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಹಾಗೂ ಬೆಳ್ಳಿಯ ಪದಕವನ್ನು ಪ್ರದಾನ ಮಾಡಲಾಯಿತು.
‘ಅನಿವಾರ್ಯ ಕಾರಣಗಳಿಂದ ನೇಪಥ್ಯಕ್ಕೆ ಸರಿದ ನನ್ನನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ. ಮತ್ತೆ ಯಕ್ಷಗಾನದಲ್ಲಿ ಸಕ್ರಿಯಗೊಳ್ಳುವ ಆಶಾವಾದ ಇದೆ’ ಎಂದು ಪಾರೆಕೋಡಿ ಗಣಪತಿ ಭಟ್ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ನೇಪಥ್ಯ ಕಲಾವಿದರಾದ ಕೃಷ್ಣಪ್ಪ ಪೂಜಾರಿ ಹಾಗೂ ನಾರಾಯಣ ಪುರುಷ ಇವರನ್ನು ಸನ್ಮಾನಿಸಲಾಯಿತು.
ನಾವುಡರ ಕುರಿತ ಕೃತಿ ಲೋಕಾರ್ಪಣೆ: ಕಾರ್ಯಕ್ರಮದಲ್ಲಿ ಹಿರಿಯ ಭಾಗವತ ಸುರೇಂದ್ರ ಫಣಿಯೂರ್ ಬರೆದ ‘ನಾ ಕಂಡಂತೆ ಕಾಳಿಂಗ ನಾವುಡರು’ ಕೃತಿಯನ್ನು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ತೆಂಕು ಹಾಗೂ ಬಡಗು ತಿಟ್ಟಿನಲ್ಲಿ ಅನೇಕ ಭಾಗವತರು ದಿ.ಕಾಳಿಂಗ ನಾವುಡರನ್ನು ಅನುಕರಣೆ ಮಾಡುತ್ತಾರೆ. ಆದರೆ ಕಾಳಿಂಗ ನಾವುಡರು ಯಾರದೇ ಶೈಲಿಯನ್ನು ಅನುಕರಣೆ ಮಾಡದೆ, ತನ್ನದೇ ಸ್ವತಂತ್ರ ಶೈಲಿಯನ್ನು ಅಳವಡಿಸಿಕೊಂಡಿದ್ದರು. ಓರ್ವ ಪ್ರಸಂಗಕರ್ತರಾಗಿ, ಉತ್ತಮ ಭಾಗವತರಾಗಿ ಹೆಸರುಪಡೆದ ಕಾಳಿಂಗ ನಾವಡರು ಇನ್ನಷ್ಟು ಸಾಧನೆ ಮಾಡುವ ಮೊದಲೇ ಇಹಲೋಕ ತ್ಯಜಿಸಿದರು. ಈ ಕೊರತೆ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ದಿ.ಕಾಳಿಂಗ ನಾಡವರ ಸಹೋದರ ಗುಂಡ್ಮಿ ಗಣಪಯ್ಯ ನಾವಡ ಮಾತನಾಡಿದರು. ಬೆಂಗಳೂರಿನ ಸುಪ್ರಜಿತ್ ಇಂಜಿನಿಯರಿಂಗ್‌ನ ಅಧಿಕಾರಿ ನಾರಾಯಣ ಶಂಕರ್ ಕಣಕ್ಕೂರು ಕಾರ್ಯಕ್ರಮ ಉದ್ಘಾಟಿಸಿದರು.
ಮಂಗಳೂರಿನ ಲೆಕ್ಕಪರಿಶೋಧಕ ಎಸ್.ಎಸ್.ಕಾಮತ್, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಟಿ.ಸುವರ್ಣ, ಉದ್ಯಮಿಗಳಾದ ವೈ.ಬಿ.ಸುಂದರ್, ಅಶೋಕ್ ಕುಮಾರ್ ಶುಭ ಹಾರೈಸಿದರು.
ಭ್ರಾಮರೀ ಯಕ್ಷಮಿತ್ರರು ಸಂಘಟನೆಯ ಪ್ರಮುಖರಾದ ವಿನಯ ಕೃಷ್ಣ ಕುರ್ನಾಡು ಸ್ವಾಗತಿಸಿದರು. ಸತೀಶ್ ಮಂಜೇಶ್ವರ ವಂದಿಸಿದರು. ದಿನೇಶ್ ಇರಾ ನಿರೂಪಿಸಿದರು. ಬಳಿಕ ಚೂಡಾಮಣಿ, ರಾಮಾಂಜನೇಯ, ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನ ನಡೆಯಿತು.