ಕರಾವಳಿಯಲ್ಲಿ ತುಳುವೇ ನಮ್ಮ ರಾಷ್ಟ್ರಭಾಷೆ: ಪ್ರೊ.ವಿವೇಕ್ ರೈ

Update: 2019-09-15 16:19 GMT

ಉಡುಪಿ, ಸೆ.15: ಎಲ್ಲ ಪ್ರಾದೇಶಿಕ ಭಾಷೆಗಳು ಕೂಡ ರಾಷ್ಟ್ರ ಭಾಷೆ ಯಾಗಿದ್ದು, ಅದರಂತೆ ನಮಗೆ ಕರ್ನಾಟಕದಲ್ಲಿ ಕನ್ನಡ ಮತ್ತು ಕರಾವಳಿಯಲ್ಲಿ ತುಳುವೇ ರಾಷ್ಟ್ರ ಭಾಷೆಯಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ್ ರೈ ಹೇಳಿದ್ದಾರೆ.

ಉಡುಪಿ ತುಳುಕೂಟದ ವತಿಯಿಂದ ಉಡುಪಿ ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ 25ನೆ ವರ್ಷದ ಪಣಿಯಾಡಿ ಕಾದಂಬರಿ ಪ್ರಶಸ್ತಿ ಮತ್ತು ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಒಂದು ಕಾಲದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ತುಳು ಮಾತನಾಡಿದರೆ ದಂಡ ವಿಧಿಸ ಲಾಗುತ್ತಿತ್ತು. ಆದರೆ ಈಗ ವಿಶ್ವವಿದ್ಯಾನಿಲಯದಲ್ಲೇ ತುಳು ಭಾಷೆಯನ್ನು ಕಲಿ ಸುವ ಮಟ್ಟಕ್ಕೆ ಬೆಳೆದಿದೆ. ತುಳುವಿಗೆ ಸಂವಿಧಾನದಲ್ಲಿ ಮಾನ್ಯತೆ ಸಿಕ್ಕಿದರೆ ಸಾಲದು. ಮುಖ್ಯವಾಗಿ ಜನತೆ ಹಾಗೂ ಆಡಳಿತ ವರ್ಗ ಮಾನ್ಯತೆ ನೀಡಬೇಕು. ಅದಕ್ಕಾಗಿ ನಾವು ಹೋರಾಟ ಹಾೂ ಶ್ರಮ ಪಡಬೇಕಾಗಿದೆ ಎಂದರು.

ತುಳು ಕೇವಲ ಮನೆಯಲ್ಲಿ ಮಾತನಾಡುವ ಮಾತೃಭಾಷೆಯಲ್ಲ. ಕನ್ನಡ, ಬ್ಯಾರಿ, ಮರಾಠಿಗರು ಕೂಡ ತುಳುವನ್ನು ಮಾತನಾಡುತ್ತಾರೆ. ಆದುದರಿಂದ ತುಳು ಒಂದು ಜಾತಿ ಧರ್ಮಕ್ಕೆ ಸೀಮಿತವಾದ ಭಾಷೆಯಲ್ಲ. ಅದು ಇಡೀ ನಾಡಿನ ಭಾಷೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಹಿರಿಯ ಸಾಹಿತಿಗಳು ಬರೆದ ಕನ್ನಡ ಕಾದಂಬರಿ ಸಹಿತ ಮೇರು ಕೃತಿಗಳು ತುಳು ಭಾಷೆಗೆ ಅನುವಾದ ಮಾಡುವ ಕೆಲಸ ಅಗತ್ಯವಾಗಿ ನಡೆಯಬೇಕು. ಈ ಮೂಲಕ ತುಳುವರ ಸಾಹಿತ್ಯ ಆಲೋಚನೆಗಳು ವಿಸ್ತಾರಗೊಳ್ಳಲು ಸಾಧ್ಯ ವಾಗುತ್ತದೆ ಎಂದ ಅವರು ತಿಳಿಸಿದರು.

ಇಂಟರ್‌ನೆಟ್, ಸಾಮಾಜಿಕ ಜಾಲತಾಣಗಳಲ್ಲಿ ತುಳು ಭಾಷೆ ಬಳಸುವವರು ಮೊದಲು ತುಳು ಯಕ್ಷಗಾನವನ್ನು ನೋಡಬೇಕು. ಆ ಮೂಲಕ ತುಳು ಶಬ್ಧವನ್ನು ಹೇಗೆ ಬಳಸಬಹುದು ಎಂದು ತಿಳಿದುಕೊಳ್ಳಬಹುದಾಗಿದೆ ಎಂದ ಅವರು, ಇಂಗ್ಲಿಷ್, ಹಿಂದಿ ಕಲಿಯಿರಿ. ಅದರ ಜೊತೆಗೆ ತುಳುವಿನಲ್ಲಿ ಮಾತನಾಡುವ ಹಾಗೂ ಬರೆಯುವ ಹವ್ಯಾಸವನ್ನು ಕೂಡ ಕಗತ ಮಾಡಿಕೊಳ್ಳಬೇಕು ಎಂದರು.

ಅಕ್ಷತರಾಜ್ ಪೆರ್ಲ ಅವರ ಬೊಳ್ಳಿ ಕಾದಂಬರಿ ಹಾಗೂ ರಾಜಶ್ರೀ ಟಿ.ರೈ ಬರೆದ ಚೌಕಿ ಕಾದಂಬರಿ ಕೃತಿಗೆ ಪಣಿಯಾಡಿ ಕಾದಂಬರಿ ಪ್ರಶಸ್ತಿ ಮತ್ತು ಹಿರಿಯ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ಅವರಿಗೆ ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ವಹಿಸಿದ್ದರು. ಬೊಳ್ಳಿ ಕೃತಿಯನ್ನು ತಾರಾ ಆಚಾರ್ಯ ಕಲ್ಮಂಜೆ ಹಾಗೂ ಚೌಕಿ ಕೃತಿಯನ್ನು ಪುತ್ತಿಗೆ ಪದ್ಮನಾಭ ರೈ ಪರಿಚಯ ಮಾಡಿದರು. ಸಂಜಯ್ ಕುಮಾರ್ ಸಾಮಗ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಉದ್ಯಮಿ ಪುರುಷೋತ್ತಮ ಶೆಟ್ಟಿ, ಪ್ರಶಸ್ತಿ ಸಮಿತಿಯ ಸಂಚಾಲಕ ಪ್ರಕಾಶ್ ಸುವರ್ಣ ಕಟಪಾಡಿ, ತುಳುಕೂಟದ ಕೋಶಾಧಿಕಾರಿ ಚೈತನ್ಯ ಎಂ.ಜಿ. ಉಪಸ್ಥಿತರಿದ್ದರು.

ತುಳುಕೂಟದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ವಂದಿಸಿದರು. ನಾಗರಾಜ್ ಜಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಗಾನ ನಾಟ್ಯ ವೈಭವ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News