ಕಾಶ್ಮೀರ ನಿರ್ಬಂಧ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಗುಲಾಂ ನಬಿ ಆಝಾದ್

Update: 2019-09-15 16:30 GMT

ಹೊಸದಿಲ್ಲಿ,ಸೆ.15: ಕಾಶ್ಮೀರ ವಿಷಯ ಕುರಿತಂತೆ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದೂ ಸೇರಿದಂತೆ ವಿಧಿ 370ರ ರದ್ದತಿಯ ಬಳಿಕ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ ಗೊಗೊಯಿ ನೇತೃತ್ವದ ಪೀಠವು ಸೋಮವಾರ ಕೈಗೆತ್ತಿಕೊಳ್ಳಲಿದೆ.

ಜಮ್ಮು-ಕಾಶ್ಮೀರದಲ್ಲಿ ನಿರ್ಬಂಧ ಸಡಿಲಿಕೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ತನ್ನ ಅರ್ಜಿಯಲ್ಲಿ ಪಕ್ಷದ ಸಹೋದ್ಯೋಗಿ ಮುಹಮ್ಮದ್ ಯೂಸುಫ್ ತಾರಿಗಾಮಿ ಅವರ ಬಂಧನವನ್ನು ಪ್ರಶ್ನಿಸಿದ್ದರೆ,ಸಜ್ಜದ್ ಲೋನೆ ನೇತೃತ್ವದ ಜಮ್ಮು-ಕಾಶ್ಮೀರ ಪೀಪಲ್ಸ್ ಕಾನ್‌ಫರೆನ್ಸ್ ವಿಧಿ 370ರ ರದ್ದತಿಯನ್ನು ಪ್ರಶ್ನಿಸಿದೆ. ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುವಂತೆ ಕೋರಿ ಎಂಡಿಎಂಕೆ ವರಿಷ್ಠ ವೈಕೊ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರೆ,ಕಾಶ್ಮೀರ ಟೈಮ್ಸ್‌ನ ಸಂಪಾದಕ ಅನುರಾಧಾ ಭಾಸಿನ್ ಕಣಿವೆಯಲ್ಲಿ ಮಾಧ್ಯಮಗಳ ಮೇಲಿನ ನಿರ್ಬಂಧಗಳ ಸಡಿಲಿಕೆಯನ್ನು ಕೋರಿದ್ದಾರೆ.

ಕಾನೂನು ಪದವೀಧರ ಮುಹಮ್ಮದ್ ಅಲೀನ್ ಸೈಯದ್ ಸಲ್ಲಿಸಿರುವ ಇನ್ನೊಂದು ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯವು ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News