ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಾಗಿ: ಶಾಸಕ ಉಮಾನಾಥ ಕೋಟ್ಯಾನ್

Update: 2019-09-15 16:51 GMT

ಮಂಗಳೂರು, ಸೆ.15: ಜೋಗಿ ಸಮುದಾಯ ಎಲ್ಲ ವಿಧದಿಂದ ಅಭಿವೃದ್ಧಿ ಹೊಂದಲು ಹಿರಿಯರು 50 ವರ್ಷಗಳ ಹಿಂದೆ ಜೋಗಿ ಸಮಾಜ ಸುಧಾಕರ ಸಂಘ ಸ್ಥಾಪಿಸಿದ್ದರು. ಅಂದು ಕಷ್ಟದ ದಿನಗಳಲ್ಲಿ ಸಮುದಾಯದ ಪ್ರಗತಿಯ ದೂರದೃಷ್ಟಿ ಹೊಂದಿ ರಚಿಸಿದ ಸಂಘ ಸುವರ್ಣ ಮಹೋತ್ಸವದ ಮೂಲಕ ಇನ್ನಷ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ. ವೈಯಕ್ತಿಕ ಸ್ವಾರ್ಥ ಹೊಂದದೇ ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ದುಡಿಯಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ನಗರದ ಕದ್ರಿ ಉದ್ಯಾನವನದ ಬಳಿಯ ಶ್ರೀ ಗೋರಕ್ಷನಾಥ ಜ್ಞಾನಮಂದಿರದಲ್ಲಿ ನಡೆದ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ಉದ್ಘಾಟಿಸಿ ರವಿವಾರ ಅವರು ಮಾತನಾಡಿದರು.

ಐವತ್ತು ವರ್ಷಗಳ ಹಿಂದೆ ನಮ್ಮ ಹಿರಿಯರು ಕಡು ಬಡತನದ ಜೀವನ ನಡೆಸುತ್ತಿದ್ದರು. ಒಪ್ಪೊತ್ತಿನ ಊಟಕ್ಕೆ ಆಗ ತತ್ವಾರವಿತ್ತು. ಅಂತಹಾ ಕಾಲದಲ್ಲಿ ಜೋಗಿ ಸಮುದಾಯದ ಹಿರಿಯರು ಸಮಾಜದ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿ, ಸೂರು ಇಲ್ಲದವರಿಗೆ ವಸತಿ ಕಲ್ಪಿಸುವ ಉದ್ದೇಶದಿಂದ ಸಂಘ ಸ್ಥಾಪಿಸಿದ್ದರು ಎಂದರು.

ಅಂದಿನ ಬಡತನ ಈಗ ಇಲ್ಲ. ಐಷಾರಾಮಿ ಬದುಕು, ಹೆಚ್ಚಿದ ಹಣದ ಚಲಾವಣೆ ಮನುಷ್ಯನನ್ನು ಆಲಸಿಯನ್ನಾಗಿಸಿದೆ. ಇದರಿಂದ ಆರೋಗ್ಯವೂ ಕೆಡುತ್ತಿದೆ. ನಾವು ನಮ್ಮ ಹಿರಿಯರ ಬದುಕನ್ನು ಅವಲೋಕಿಸಬೇಕು. ಸಂಘ ನಡೆದು ಬಂದ ಹಾದಿ ಮೆಲುಕು ಹಾಕಿ ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಿ ಸಮುದಾಯದ ಅಭಿವೃದ್ದಿ ಮಾಡಬೇಕು ಎಂದರು.

ಅತಿಥಿಯಾಗಿದ್ದ ದ.ಕ. ಜಿಪಂ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ರಾಜಲಕ್ಷ್ಮಿ ಮಾತನಾಡಿ, ಕರ್ನಾಟಕ ಜೋಗಿ ಸಮಾಜ ಸುಧಾಕರ ಸಂಘವು ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ.

ಐವತ್ತು ವರ್ಷಗಳ ಹಿಂದೆ ಸಂಘ ಸ್ಥಾಪನೆಯಾದಾಗ ಇದ್ದ ಪರಿಸ್ಥಿತಿ ಮತ್ತು ಈಗಿನ ಪರಿಸ್ಥಿತಿಗೂ ತುಂಬಾ ವ್ಯತ್ಯಾಸವಿದೆ. ಸಂಘ ಸ್ಥಾಪಿಸಿದ ಹಿರಿಯರ ಕನಸು ನನಸು ಮಾಡಿ ಸಂಘದ ಉದ್ದೇಶ ಸಾಲ್ಯಗೊಳಿಸುವಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ. ಇದಕ್ಕಾಗಿ ಸಂಘದ ಸದಸ್ಯರ ಸಂಖ್ಯೆ ಹೆಚ್ಚಿಸಬೇಕು ಎಂದರು.

ಹುಬ್ಬಳಿಯ ಉದ್ಯಮಿ ಶಿವಾಜಿ ಡಿ. ಮಧೂರ್‌ಕರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿಯ ಸಾಯಿ ಈಶ್ವರ್ ಗುರೂಜಿ, ಉಡುಪಿ ಜೋಗಿ ಸಮಾಜ ಸೇವಾ ಸಮಿತಿ ಅಧ್ಯಕ್ಷ ಪಿ. ಸುರೇಶ್ ಕುಮಾರ್ ಜೋಗಿ, ಮಂಗಳೂರು ಎಆರ್‌ಟಿಒ ಜೆ.ಪಿ. ಗಂಗಾಧರ್, ವಕೀಲ ಕೆ. ಪ್ರೇಮನಾಥ್ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮಕ್ಕೆ ಭೇಟಿ ನೀಡಿದ ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘಕ್ಕೆ ಶುಭ ಹಾರೈಸಿದರು.

ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ಅಧ್ಯಕ್ಷ ಕಿರಣ್‌ಕುಮಾರ್ ಜೋಗಿ ಉಪಸ್ಥಿತರಿದ್ದರು. ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗಂಗಾಧರ ಬಿ. ವಂದಿಸಿದರು. ಹರೀಶ್ ಶಕ್ತಿನಗರ ಕಾರ್ಯಕ್ರಮ ನಿರೂಪಿಸಿದರು.

ಸುವರ್ಣ ಮಹೋತ್ಸವ ಕ್ರೀಡಾ ಕೂಟದ ವಿಜೇತರಿಗೆ ಈ ಸಂದರ್ಭ ಬಹುಮಾನ ವಿತರಿಸಲಾಯಿತು. ಸ್ವರ್ಣ ಜ್ಯೋತಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News