ಕಾಶ್ಮೀರಿಗಳ ಮೇಲಿನ ನಿರ್ಬಂಧ ವಿರೋಧಿಸಿ ಪಂಜಾಬ್ ನಾದ್ಯಂತ ಧರಣಿ: ಮೋದಿ ಪ್ರತಿಕೃತಿಗಳಿಗೆ ಬೆಂಕಿ

Update: 2019-09-16 09:59 GMT
Photo: thewire.in

ಹೊಸದಿಲ್ಲಿ, ಸೆ.16: ಸಂವಿಧಾನದ 370ನೇ ವಿಧಿ ರದ್ದತಿ ನಂತರ ವಿಶೇಷ ಸ್ಥಾನಮಾನ ಕಳೆದುಕೊಂಡ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರಕಾರ ವಿಧಿಸಿರುವ ನಿರ್ಬಂಧಗಳನ್ನು ವಿರೋಧಿಸಿ ಹಾಗೂ ಕಾಶ್ಮೀರದ ಜನತೆಗೆ ಬೆಂಬಲ ಸೂಚಿಸಿ ರವಿವಾರ ಚಂಡೀಗಢದಲ್ಲಿ ನಡೆಯಬೇಕಿದ್ದ ರ್ಯಾಲಿಗೆ ತೆರಳುತ್ತಿದ್ದ ಪ್ರತಿಭಟನಕಾರರನ್ನು ಪೊಲೀಸರು ತಡೆದಿದ್ದರು. ಹೀಗಾಗಿ ಪಂಜಾಬ್ ರಾಜ್ಯದ ವಿವಿಧೆಡೆ ಧರಣಿ ನಡೆಯಿತಲ್ಲದೆ ಧರಣಿನಿರತರು ಪ್ರಧಾನಿ ನರೇಂದ್ರ ಮೋದಿಯ ಪ್ರತಿಕೃತಿಗಳನ್ನೂ ದಹಿಸಿದ್ದಾರೆ.

ಮೊಹಾಲಿಯಲ್ಲಿ ಹತ್ತು ಮಂದಿ ಮಹಿಳೆಯರೂ ಸೇರಿದಂತೆ ಕನಿಷ್ಠ 30 ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗೆ ವಶಕ್ಕೆ ಪಡೆದುಕೊಂಡವರ ಪೈಕಿ ವಿವಿಧ ರೈತ ಹಾಗೂ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳೂ ಒಳಗೊಂಡಿದ್ದಾರೆ.

ಪಂಜಾಬ್ ಸ್ಟೂಡೆಂಟ್ಸ್ ಯೂನಿಯನ್, ನವ್‍ ಜವಾನ್ ಭಾರತ್ ಸಭಾ, ಕಿಸಾನ್ ಸಂಘರ್ಷ ಸಮಿತಿ, ಪೆಂಡು ಮಜ್ದೂರ್ ಯೂನಿಯನ್ ಹಾಗೂ ವಿವಿಧ ಎಡಪಂಥೀಯ ಕೈಗಾರಿಕಾ ಕಾರ್ಮಿಕರ ಸಂಘಟನೆಗಳು ರವಿವಾರದ ರ್ಯಾಲಿಗೆ ಬೆಂಬಲ ಸೂಚಿಸಿದ್ದವು. ಆದರೆ ಪ್ರತಿಭಟನಾಕಾರರಿಗೆ ಚಂಡೀಗಢಕ್ಕೆ ತೆರಳದಂತೆ ತಡೆದ ಕಾರಣ ಭಟಿಂಡಾ, ಮಾನ್ಸ, ಫರಿದ್‍ಕೋಟ್, ಮುಕ್ತ್‍ಸರ್, ಸಂಗ್ರೂರ್, ಫಿರೋಝ್‍ಪುರ್ ಹಾಗೂ ಬರ್ನಾಲ ಜಿಲ್ಲೆಗಳಲ್ಲಿ ಧರಣಿ ನಡೆದಿವೆ.

ರವಿವಾರ ನಡೆಯಬೇಕಿದ್ದ ಪ್ರತಿಭಟನಾ ರ್ಯಾಲಿ ಹಿನ್ನೆಲೆಯಲ್ಲಿ ದಾಖಲಾದ ಪಿಐಎಲ್ ಕಾರಣ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ರಾಜ್ಯ ಪೊಲೀಸರಿಗೆ ಶುಕ್ರವಾರ ನೀಡಿದ ನಿರ್ದೇಶನದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ವ ಕ್ರಮ ಕೈಗೊಳ್ಳುವಂತೆ ಹಾಗೂ ಪ್ರತಿಭಟನಾಕಾರರು ಕಾನೂನನ್ನು ಕೈಗೆತ್ತಿಕೊಳ್ಳದೇ ಇರುವಂತೆ ನೋಡಿಕೊಳ್ಳುವಂತೆ ಸೂಚಿಸಿತ್ತು.

ಹೈಕೋರ್ಟ್ ಆದೇಶ ಪಾಲನಾ ವರದಿಯನ್ನು  ಮುಂದಿನ ವಿಚಾರಣಾ ದಿನಾಂಕವಾದ ಸೆಪ್ಟೆಂಬರ್ 20ಕ್ಕಿಂತ ಮುಂಚಿತವಾಗಿ  ಪಂಜಾಬ್ ಪೊಲೀಸರು ಸಲ್ಲಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News