‘ಬ್ಯಾಂಕ್ ವಿಲೀನಿಕರಣದಿಂದ ದೇಶದ ಆರ್ಥಿಕತೆಗೆ ಭಾರೀ ಹಿನ್ನಡೆ’

Update: 2019-09-16 14:17 GMT

ಉಡುಪಿ, ಸೆ.16:ಪ್ರಸ್ತುತ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಕೈಗಾರಿಕಾ ರಂಗ ಕೂಡಾ ನಿರಾಶದಾಯಕ ಸ್ಥಿತಿಯಲ್ಲಿದೆ. ಹೀಗಾಗಿ ಬ್ಯಾಂಕುಗಳು ತಮ್ಮ ಅಗಾಧ ಸಂಪನ್ಮೂಲಗಳೊಂದಿಗೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿ ರುವ ಸಂದರ್ಭದಲ್ಲಿ, ಅವುಗಳ ವಿಲೀನಿಕರಣದ ನಿರ್ಣಯದಿಂದ ಭಾರೀ ಹಿನ್ನಡೆಯುಂಟಾಗು ವುದರಲ್ಲಿ ಸಂಶಯವಿಲ್ಲ ಎಂದು ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಹೇಮಂತ್ ಯು.ಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರಕಾರದ ಬ್ಯಾಂಕ್‌ಗಳ ವಿಲೀನಿಕರಣದ ನಿರ್ಧಾರವನ್ನು ವಿರೋಧಿಸಿ ಕಾರ್ಪೋರೇಷನ್ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರ ಸಂಘಟನೆಗಳು ಇಂದು ಸಂಜೆ ಕಾರ್ಪೋರೇಷನ್ ಬ್ಯಾಂಕ್ ಸಂಸ್ಥಾಪಕರ ಕಚೇರಿ ಆವರಣದಲ್ಲಿ ನಡೆಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಸರಕಾರದ ಈ ನಿರ್ಧಾರದಿಂದ ಈಗಾಗಲೇ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳಲಿದೆ.ಪ್ರಸ್ತುತ ದೇಶಕ್ಕೆ ಸಶಕ್ತ ಬ್ಯಾಂಕುಗಳ ಅಗತ್ಯವಿದೆಯೇ ಹೊರತು ಗಾತ್ರದಲ್ಲಿ ದೊಡ್ಡ ಬ್ಯಾಂಕುಗಳಲ್ಲ ಎಂದವರು ಹೇಳಿದರು.

ಕನಿಷ್ಠ ಕಳೆದೊಂದು ದಶಕದಲ್ಲಿ ಬ್ಯಾಂಕುಗಳಿಂದ ಉದ್ಯೋಗಿಗಳು ನಿವೃತ್ತ ರಾಗುತಿದ್ದಾರೆಯೇ ಹೊರತು ಖಾಲಿಯಾದ ಸ್ಥಾನಗಳನ್ನು ತುಂಬಲು, ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಸರಕಾರ ಮನಸ್ಸು ಮಾಡುತ್ತಿಲ್ಲ. ಇದರಿಂದ ಇರುವ ಅಧಿಕಾರಿಗಳು ಹಾಗೂ ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚುತಿದ್ದು, ಕಳೆದ ಒಂದು ವರ್ಷದಲ್ಲಿ 100ಕ್ಕೂ ಅಧಿಕ ಬ್ಯಾಂಕ್ ನೌಕರರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದವರು ಆರೋಪಿಸಿದರು.

ವಿಶ್ವದ ಎಲ್ಲೂ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಯಶಸ್ಸುಗೊಂಡ ಉದಾಹರಣೆಗಳಿಲ್ಲ. ನಾವು ನೋಡಿದಂತೆ ಎಸ್‌ಬಿಐ ಹಾಗೂ ಸಹವರ್ತಿ ಬ್ಯಾಂಕುಗಳ ವಿಲೀನ ಹಾಗೂ ಬ್ಯಾಂಕ್ ಆಫ್ ಬರೋಡದಲ್ಲಿ ನಮ್ಮ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳ ವಿಲೀನ ಕೂಡಾ ವಿಫಲವಾಗಿದೆ. ಆದರೂ ಕೇಂದ್ರ ಸರಕಾರ ತರಾತುರಿಯಿಂದ ಮತ್ತೆ 10 ಸಾರ್ವಜನಿಕ ರಂಗದ ಬ್ಯಾಂಕುಗಳನ್ನು ವಿಲೀನಿಕರಿಸಿ 4 ಬ್ಯಾಂಕು ಗಳಾಗಿ ಮಾಡುವಾಗ ಆರು ಬ್ಯಾಂಕುಗಳ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ. ವಿಲೀನದಿಂದ ಬ್ಯಾಂಕುಗಳ ಶಕ್ತಿ ಹೆಚ್ಚುವುದಿಲ್ಲ, ಅನುತ್ಪಾದಕ ಆಸ್ತಿಯ ಪ್ರಮಾಣ ತಗ್ಗುವುದಿಲ್ಲ, ಸಾಲ ನೀಡುವ ಶಕ್ತಿಯೂ ಹೆಚ್ಚುವುದಿಲ್ಲ ಎಂದವರು ವಿವರಿಸಿದರು.

ಅಶೋಕ ಕೋಟ್ಯಾನ್ ಅವರು ಮಾತನಾಡಿ 2016ರಿಂದ ಸರಕಾರ ಬ್ಯಾಂಕ್ ನೌಕರರ ಸಂಬಳದ ಏರಿಕೆಗೆ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ತಡೆಯೊಡ್ಡುತ್ತಿದೆ. ಕಳೆದ ಮೂರು ವರ್ಷಗಳಿಂದ ಪ್ರತಿಯೊಂದು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೆ ಸತತ ಹೋರಾಟದ ಹೊರತಾಗಿಯೂ ಬ್ಯಾಂಕ್ ನೌಕರರ ಸಂಬಳ ಏರಿಕೆಯಾಗಿಲ್ಲ ಎಂದರು.

ಸಂಘದ ಅಧ್ಯಕ್ಷ ರಾಮಮೋಹನ್ ಅವರೂ ಮಾತನಾಡಿದರು. ಸಂಘಟನೆಗಳ ಪದಾಧಿಕಾರಿಗಳಾದ ಮನೋಜ್ ಕುಮಾರ್, ರಮೇಶ್, ವಂಶಿಕೃಷ್ಣ, ಜಯನ್ ಮಲ್ಪೆ ಮುಂತಾದವರು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ಸಂಚಾಲಕ ಹೆರಾಲ್ಡ್ ಡಿಸೋಜ ನಿರ್ವಹಿಸಿದರು. ಉಡುಪಿ ವಲಯ ಕಾರ್ಯದರ್ಶಿ ನಾಗೇಶ್ ನಾಯಕ್ ವಂದಿಸಿದರು.

ಸೆ. 26, 27ರ ಪ್ರತಿಭಟನೆಗೆ ಬೆಂಬಲ

ಕೇಂದ್ರ ಸರಕಾರದ ಈ ತಪ್ಪು ನಿರ್ಧಾರವನ್ನು ತೀವ್ರವಾಗಿ ಪ್ರತಿಭಟಿಸುವ ಜೊತೆಗೆ ನಮ್ಮ ದೇಶದ ಆರ್ಥಿಕತೆಗೆ, ನಿರುದ್ಯೋಗ ಸಮಸ್ಯೆಗೆ, ಬ್ಯಾಂಕ್ ಗ್ರಾಹಕರ ಸೇವೆಗಳಿಗೆ ಬರಬಹುದಾದ ಇನ್ನೂ ಹೆಚ್ಚಿನ ಅಪಾಯ ತಡೆಯುವ ಉದ್ದೇಶದಿಂದ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ಎಲ್ಲಾ ಸಂಘಟನೆಗಳು ಒಂದಾಗಿ ಬ್ಯಾಂಕ್ ವಿಲೀನಿಕರಣದ ಸರಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸುವುದಲ್ಲದೇ, ಸೆ. 26 ಮತ್ತು 27ರಂದು ರಾಷ್ಟ್ರವ್ಯಾಪಿ ಮುಷ್ಕರವನ್ನು ಹಮ್ಮಿಕೊಳ್ಳಲು ಕೇಂದ್ರೀಯ ನಾಯಕರು ಕೈಗೊಂಡ ನಿರ್ಧಾರಕ್ಕೆ ಸ್ಥಳೀಯ ಎಲ್ಲಾ ಸಂಘಟನೆಗಳು ಒಮ್ಮತದ ಬೆಂಬಲ ನೀಡುತ್ತವೆ ಎಂದು ಪ್ರತಿಭಟನಕಾರರು ತಿಳಿಸಿದರು.

113 ವರ್ಷಗಳ ಇತಿಹಾಸದ ಬ್ಯಾಂಕ್

ಶ್ರೀಕೃಷ್ಣನ ನಾಡಿನಲ್ಲಿ ಹುಟ್ಟಿದ ಕಾರ್ಪೋರೇಷನ್ ಬ್ಯಾಂಕಿಗೆ 113 ವರ್ಷಗಳಿಗೂ ಅಧಿಕ ಭವ್ಯ ಇತಿಹಾಸವಿದೆ. 1906ರ ಮಾ.12ರಂದು ಸಾಮಾಜಿಕ ಕಳಕಳಿಯುಳ್ಳ ಕೊಡುಗೈ ದಾನಿ ಹಾಜಿ ಅಬ್ದುಲ್ಲಾ ಸಾಹೇಬರ ಮುತುವರ್ಜಿಯಿಂದ, ಲೋಕಮಾನ್ಯ ಬಾಲ ಗಂಗಾಧರ ತಿಲಕರ ಸ್ವದೇಶಿ ಚಳವಳಿಗೆ ಪೂರಕವಾಗಿ ಜನಸಾಮಾನ್ಯರ ಒಳಿತಿಗಾಗಿ ಪ್ರಾರಂಭಗೊಂಡ ಬ್ಯಾಂಕ್ ಸತತವಾಗಿ ಉತ್ತಮ ನಿರ್ವಹಣೆಯ ದಾಖಲೆಯನ್ನು ಹೊಂದಿದೆ.

ಜನರ ಅಚ್ಚುಮೆಚ್ಚಿನ ಕಾರ್ಪೋರೇಷನ್ ಬ್ಯಾಂಕ್‌ನ್ನು ವಿಲೀನಿಕರಣವೆಂಬ ಷಡ್ಯಂತ್ರ ಹೂಡಿ ಮುಚ್ಚುವ ಹುನ್ನಾರವನ್ನು ಸಭೆಯಲ್ಲಿ ಬಲವಾಗಿ ಪ್ರತಿಭಟಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News