ನಿರಾಶ್ರಿತ ಕೇಂದ್ರದಿಂದ ಸ್ಥಳಾಂತರಗೊಂಡಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

Update: 2019-09-16 14:29 GMT

ಪಾಟ್ನ, ಸೆ.16: ಕಳೆದ ವರ್ಷ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಿಂದ ಸುದ್ದಿಯಾಗಿದ್ದ ಬಿಹಾರದ ಮುಝಫರ್‌ಪುರ ನಿರಾಶ್ರಿತರ ಕೇಂದ್ರದಿಂದ ಸ್ಥಳಾಂತರಗೊಳಿಸಿದ್ದ ಮಹಿಳೆಯನ್ನು ಅಪಹರಿಸಿದ ನಾಲ್ವರು ಆಕೆಯ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿಯೇ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ನಿರಾಶ್ರಿತ ಕೇಂದ್ರದಲ್ಲಿ ಲೈಂಗಿಕ ದೌರ್ಜನ್ಯ ಬೆಳಕಿಗೆ ಬಂದ ಬಳಿಕ ಅಲ್ಲಿದ್ದ ಯುವತಿಯರನ್ನು ರಕ್ಷಿಸಿ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಈ ಯುವತಿ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಳು. ಶುಕ್ರವಾರ ಸಂಜೆ ಈಕೆಯನ್ನು ಅಪಹರಿಸಿದ ನಾಲ್ವರು ದುಷ್ಕರ್ಮಿಗಳು ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ ಎಸಗಿ ಬಳಿಕ ಮನೆಯ ಬಳಿ ಬಿಟ್ಟು ತೆರಳಿದ್ದಾರೆ ಎಂದು ಶನಿವಾರ ಪೊಲೀಸರಿಗೆ ದೂರು ನೀಡಲಾಗಿದೆ. ಅದೇ ದಿನ ಮಹಿಳೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ದುಷ್ಕರ್ಮಿಗಳಲ್ಲಿ ಇಬ್ಬರು ಸಹೋದರರಾಗಿದ್ದು ಒಂದೇ ಕುಟುಂಬದವರಾಗಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ನಾಲ್ಕು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಜಯಂತ್ ಕಾಂತ್ ಹೇಳಿದ್ದಾರೆ. ಪ್ರಕರಣವನ್ನು ಗಮನಿಸಿದ್ದು ಸಂತ್ರಸ್ತೆಯ ಭದ್ರತೆಗೆ ಕ್ರಮ ಕೈಗೊಳ್ಳುವಂತೆ ಬಿಹಾರ ಡಿಜಿಪಿಗೆ ಪತ್ರ ಬರೆಯಲಾಗಿದೆ. ಘಟನೆಯ ತನಿಖೆಗೆ ಸಮಿತಿಯೊಂದನ್ನು ರಚಿಸಿದ್ದು ಶೀಘ್ರವೇ ಬಿಹಾರದ ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತೇವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News