ಸಸಿಕಾಂತ್ ಸೆಂಥಿಲ್ ತೇಜೋವಧೆ ಖಂಡಿಸಿ ಡಿಎಸ್‌ಎಸ್ ಪ್ರತಿಭಟನೆ

Update: 2019-09-16 14:37 GMT

ಮಂಗಳೂರು, ಸೆ.16: ದೇಶದಲ್ಲಿ ಪ್ರಜಾಪ್ರಭುತ್ವದ ವೌಲ್ಯ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತೇಜೋವಧೆ ಖಂಡಿಸಿ ಡಿಎಸ್‌ಎಸ್ ಜಿಲ್ಲಾ ಘಟಕ ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಮಂಗಳೂರು ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಕ್ಲಾಕ್ ಟವರ್- ಮಿನಿ ವಿಧಾನಸೌಧ- ಎ.ಬಿ.ಶೆಟ್ಟಿ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿ ಬಹಿರಂಗ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್, ನಿಷ್ಠಾವಂತ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಕೆಲ ಜನಪ್ರತಿನಿಧಿಗಳು ಅವರನ್ನು ‘ದೇಶದ್ರೋಹಿ’ ಎಂಬಂತೆ ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವದನ್ನೇ ಅಪರಾಧವೆಂಬಂತೆ ಬಿಂಬಿಸಲಾಗುವುತ್ತಿರುವುದು ಅಪಾಯದ ಸಂಕೇತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶಾದ್ಯಂತ ಜಿಎಸ್‌ಟಿ ಹೇರಿಕೆ ಬಳಿಕ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ದಲಿತರು, ಅಲ್ಪಸಂಖ್ಯಾತರ ಮೇಲೆ ದಿನದಿಂದ ದಿನಕ್ಕೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪ್ರಜ್ಞಾವಂತರು ಜನರು ಒಗ್ಗಟ್ಟಾಗಬೇಕು. ಕೇಂದ್ರ ಸರಕಾರದ ಆಡಳಿತ ನಿಷ್ಕಿಯವಾಗಿದೆ. ಎಲ್ಲರೂ ಪ್ರತಿಭಟಸುವ ಸಮಯ ಬಂದಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕರಾದ ಕೃಷ್ಣಾನಂದ ಡಿ., ಲಕ್ಷ್ಮಣ್ ಕಾಂಚನ್, ಎಚ್.ಡಿ. ಲೋಹಿತ್, ಹರೀಶ್, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News