ಕೌಶಲ ಕೇಂದ್ರಗಳ ಪ್ರಗತಿ ಪರಿಶೀಲನೆಗೆ ಆದ್ಯತೆ: ಯು.ಟಿ.ಖಾದರ್

Update: 2019-09-16 14:46 GMT

ಮಂಗಳೂರು, ಸೆ.16: ಜಿಲ್ಲೆಯಲ್ಲಿರುವ ವಿವಿಧ ಕೌಶಲ ಕೇಂದ್ರಗಳ ಪ್ರಗತಿ ಪರಿಶೀಲನೆ ಆಗಬೇಕಿದೆ. ಆ ಮೂಲಕ ಈ ಕೌಶಲ ಕೇಂದ್ರಗಳು ಎಷ್ಟು ಮಂದಿಗೆ ಕೌಶಲ ತರಬೇತಿ ನೀಡಿದೆ. ಎಷ್ಟು ಮಂದಿ ಅದರ ಪ್ರಯೋಜನ ಪಡೆದಿದ್ದಾರೆ ಮತ್ತು ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದು ಈ ಕೇಂದ್ರಗಳು ಏನೇನು ಮಾಡಿದೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ಪಡೆಯುವ ಅಗತ್ಯವಿದೆ. ಅದಕ್ಕಾಗಿ ಶೀಘ್ರ ಕೌಶಲ ಕೇಂದ್ರಗಳ ಪ್ರಗತಿ ಪರಿಶೀಲನೆಗೆ ಆದ್ಯತೆ ನೀಡಲಾಗುವುದು ಮಾಜಿ ಸಚಿವ ಹಾಗು ಹಾಲಿ ಶಾಸಕ ಯು.ಟಿ.ಖಾದರ್ ಹೇಳಿದರು.

ನ್ಯಾಶನಲ್ ಸ್ಕಿಲ್ ಡೆವಲಪ್‌ಮೆಂಟ್ ಕೋರ್ಪರೇಶನ್‌ನ ಸಹಯೊಗದಲ್ಲಿ ನಗರದ ‘ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಫೈರ್ ಆ್ಯಂಡ್ ಸೇಫ್ಟಿ ಇಂಜಿನಿಯರಿಂಗ್’ (ಮಿಫ್ಸೆ) ಸಂಸ್ಥೆಯಡಿ ‘ಸ್ಕಿಲ್ ಇಂಡಿಯಾ’ ಯೋಜನೆಗೆ ಸೋಮವಾರ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹಲವು ಕೌಶಲ ಕೇಂದ್ರಗಳಿವೆ. ಆದರೆ ಈ ಬಗ್ಗೆ ಜನರಲ್ಲಿ ಸೂಕ್ತ ಮಾಹಿತಿ ಇಲ್ಲ. ಅದಕ್ಕಾಗಿ ಜಾಗೃತಿ ಮೂಡಿಸಬೇಕಿದೆ. ಮಿಫ್ಸೆ ಸಂಸ್ಥೆಯು 1 ಸಾವಿರ ಮಂದಿಗೆ ಉಚಿತ ತರಬೇತಿ ನೀಡಲು ಮುಂದಾಗಿರುವುದು ಶ್ಲಾಘನೀಯ. ಯುವ ಜನಾಂಗ ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕಿದೆ. ಕೆಲಸದಲ್ಲಿ ತಾಳ್ಮೆ ಅತ್ಯಗತ್ಯ. ಶಿಕ್ಷಣ ಪಡೆದೊಡನೆ ದೊಡ್ಡ ಮೊತ್ತದ ವೇತನಕ್ಕೆ ಹಾತೊರೆಯದೆ ಉದ್ಯೋಗದ ಅನುಭವ ಪಡೆಯಲು ಮುಂದಾಗಿ ಎಂದು ಯು.ಟಿ.ಖಾದರ್ ನುಡಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ದೇಶದಲ್ಲಿ ನಿರುದ್ಯೋಗ ಭೀತಿಗಿಂತಲೂ ಬೇಡಿಕೆ ಮತ್ತು ಪೂರೈಕೆಯ ಮಧ್ಯೆ ಸಾಕಷ್ಟು ಅಂತರವಿದೆ. ಅದನ್ನು ಅರ್ಥ ಮಾಡಿಕೊಂಡು ಸಕಾಲಕ್ಕೆ ಸ್ಪಂದಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದಾಗಿದೆ. ಈ ನಿಟ್ಟಿನಲ್ಲಿ ಸ್ಥಾಪಿಸಲಾಗುವ ಕೌಶಲ ವೃದ್ಧಿಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು 2022ರೊಳಗೆ ಯುವ ಸಮೂಹದ 40 ಕೋಟಿ ಮಂದಿಗೆ ಕೌಶಲ ತರಬೇತಿ ನೀಡುವ ಗುರಿ ಹೊಂದಿದ್ದಾರೆ. ಅದಕ್ಕಾಗಿ ಸ್ಕಿಲ್ ಇಂಡಿಯಾ ಮಿಶನ್ ಮೂಲಕ 4 ಸಾವಿರ ಹೊಸ ಕೋರ್ಸ್‌ಗಳ ಸದ್ಬಳಕೆ ಮಾಡುವ ಅವಕಾಶವಿದೆ ಎಂದು ಡಾ.ಪಿ.ಎಸ್. ಯಡಪಡಿತ್ತಾಯ ನುಡಿದರು.

ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಕಾರ ರಘುವೀರ್ ಸೂಟರ್‌ಪೇಟೆ, ಎನ್‌ಎಸ್‌ಡಿಸಿ ಸಂಸ್ಥೆಯ ರಜತ್ ಸಚ್‌ದೇವ್, ರಾಜ್ಯ ಮುಕ್ತ ವಿವಿಯ ನಿಕಟಪೂರ್ವ ಡೀನ್ ಡಾ. ಜಗದೀಶ್, ಮಿಫ್ಸೆ ಸಂಸ್ಥೆಯ ಅಧ್ಯಕ್ಷ ವಿನೋದ್ ಕೆ. ಜಾನ್, ಕಾರ್ಯದರ್ಶಿ ಮನೋಜ್ ಪಿ.ವಿ., ಪ್ರಾಂಶುಪಾಲ ಯಶವಂತ ಗೋಪಾಲ್ ಶೆಟ್ಟಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News