ಜಾಗತಿಕ ತೈಲ ಬೆಲೆ 10 ಶೇಕಡದಷ್ಟು ಏರಿಕೆ

Update: 2019-09-16 15:56 GMT

ಹಾಂಕಾಂಗ್, ಸೆ. 16: ಸೌದಿ ಅರೇಬಿಯದ ಎರಡು ತೈಲ ಸ್ಥಾವರಗಳ ಮೇಲೆ ದಾಳಿ ನಡೆದು ಉತ್ಪಾದನೆ ಅರ್ಧಕ್ಕೆ ಇಳಿದ ಬಳಿಕ, ಸೋಮವಾರ ತೈಲ ಬೆಲೆಗಳಲ್ಲಿ 10 ಶೇಕಡಕ್ಕೂ ಅಧಿಕ ಹೆಚ್ಚಳವಾಗಿದೆ.

ದಾಳಿಯ ಹಿಂದೆ ಇರಾನ್ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದು, ಆ ದೇಶದ ಮೇಲೆ ಸೇನಾ ದಾಳಿ ನಡೆಯುವ ಸಾಧ್ಯತೆಗಳು ಉಜ್ವಲವಾಗಿವೆ.

ಏಶ್ಯದ ಸೋಮವಾರದ ವ್ಯವಹಾರದಲ್ಲಿ, ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯಟ್ ಕಂಪೆನಿಯ ತೈಲ ದರ 10.68 ಶೇಕಡದಷ್ಟು ಏರಿದ್ದು, ಬ್ಯಾರಲ್‌ ಗೆ 60.71 ಡಾಲರ್ ಆಗಿದೆ ಹಾಗೂ ಬ್ರೆಂಟ್ ತೈಲ ದರ 11.77 ಶೇಕಡದಷ್ಟು ಏರಿಕೆಯಾಗಿದ್ದು, ಬ್ಯಾರಲ್‌ ಗೆ 67.31 ಡಾಲರ್ ಆಗಿದೆ.

ಸೋಮವಾರ ಒಂದು ಹಂತದಲ್ಲಿ ಬ್ರೆಂಟ್ ತೈಲ ದರ ಬಹುತೇಕ 20 ಶೇಕಡದಷ್ಟು ಏರಿತ್ತು ಹಾಗೂ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯಟ್ ತೈಲದ ದರ 15 ಶೇಕಡದಷ್ಟು ಏರಿತ್ತು.

ಸೌದಿ ಅರೇಬಿಯದಲ್ಲಿರುವ ವಿಶ್ವದ ಅತಿ ದೊಡ್ಡ ತೈಲ ಸಂಸ್ಕರಣಾ ಸ್ಥಾವರ ಮತ್ತು ಸೌದಿ ಅರಾಮ್ಕೊ ನಿರ್ವಹಿಸುತ್ತಿರುವ ಮಹತ್ವದ ತೈಲ ಕ್ಷೇತ್ರವೊಂದರ ಮೇಲೆ ಶನಿವಾರ ಮುಂಜಾನೆ ಡ್ರೋನ್ ದಾಳಿ ನಡೆಸಲಾಗಿತ್ತು. ದಾಳಿಯ ಹೊಣೆಯನ್ನು ಯೆಮನ್‌ ನ ಹೌದಿ ಬಂಡುಕೋರರು ವಹಿಸಿದ್ದರು. ದಾಳಿಯಿಂದಾಗಿ ಜಾಗತಿಕ ತೈಲ ಪೂರೈಕೆಗೆ ಸಂಬಂಧಪಟ್ಟ ಮಹತ್ವದ ಸಂಸ್ಕರಣಾ ಘಟಕವೊಂದರಲ್ಲಿ ಬೃಹತ್ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿತ್ತು.

ಯೆಮನ್‌ನ ಇರಾನ್ ಬೆಂಬಲಿತ ಹೌದಿ ಬಂಡುಕೋರರು ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದರೂ, ದಾಳಿಯನ್ನು ಯೆಮನ್‌ನಿಂದ ನಡೆಸಲಾಗಿತ್ತು ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.

ದಾಳಿಯ ಹಿಂದೆ ಇರಾನ್ ಇದೆ ಎನ್ನುವುದನ್ನು ದಾಖಲೆಗಳು ಸೂಚಿಸಿವೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಪತ್ರಕರ್ತರಿಗೆ ಹೇಳಿದರು. ಆದರೆ, ಈ ಆರೋಪವನ್ನು ಇರಾನ್ ನಿರಾಕರಿಸಿದೆ.

ದಾಳಿಯ ಹೊಣೆಯನ್ನು ಪುರಾವೆಯಿಲ್ಲದೆ ನಿರ್ಧರಿಸುವುದು ಸರಿಯಲ್ಲ: ಚೀನಾ

ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ನಡೆದ ದಾಳಿಯ ಹೊಣೆಯನ್ನು, ಯಾವುದೇ ನಿರ್ಣಾಯಕ ಪುರಾವೆಗಳಿಲ್ಲದೆ ಯಾರ ಮೇಲಾದರೂ ಹೊರಿಸುವುದು ಬೇಜವಾಬ್ದಾರಿಯುತವಾಗಿದೆ ಎಂದು ಚೀನಾದ ವಿದೇಶ ಸಚಿವಾಲಯ ಸೋಮವಾರ ಹೇಳಿದೆ.

ಬೀಜಿಂಗ್‌ನಲ್ಲಿ ಸೋಮವಾರ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್, ಸಂಬಂಧಪಟ್ಟ ಎಲ್ಲ ಪಕ್ಷಗಳು ಸಂಯಮ ವಹಿಸುತ್ತವೆ ಎಂದು ನಾನು ಭಾವಿಸುವುದಾಗಿ ಹೇಳಿದರು.

ಯೆಮನ್ ಶಾಂತಿಗಾಗಿ ಕೆಲಸ ಮಾಡಲು ಸಿದ್ಧ: ಇರಾನ್

ಯೆಮನ್ ಮತ್ತು ಆ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಯಸುವ ದೇಶಗಳು ಮತ್ತು ವಿಶ್ವಸಂಸ್ಥೆಯೊಂದಿಗೆ ಸಹಕರಿಸಲು ಇರಾನ್ ಸಿದ್ಧವಾಗಿದೆ ಎಂದು ಇರಾನ್ ಸರಕಾರದ ವಕ್ತಾರರೊಬ್ಬರು ಸೋಮವಾರ ಹೇಳಿದ್ದಾರೆ.

‘‘ಯೆಮನ್‌ನಲ್ಲಿ ಶಾಂತಿ ಬಯಸುವ ಹಾಗೂ ಯೆಮನ್ ಮತ್ತು ವಲಯಕ್ಕೆ ಸ್ಥಿರತೆ ಮರಳುವುದನ್ನು ಬಯಸುವ ಎಲ್ಲ ದೇಶಗಳು ಮತ್ತು ವಿಶ್ವಸಂಸ್ಥೆ ಜೊತೆಗೆ ಸಹಕರಿಸಲು ಇರಾನ್ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ನಾನು ಈ ಮೂಲಕ ಘೋಷಿಸುತ್ತೇನೆ’’ ಎಂದು ಸರಕಾರಿ ಟೆಲಿವಿಶನ್‌ನಲ್ಲಿ ಪ್ರಸಾರವಾದ ಹೇಳಿಕೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News