ಕಾಪು: ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2019-09-16 16:41 GMT

ಕಾಪು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಕಾಪು ಬ್ಲಾಕ್ ಕಾಂಗ್ರೆಸ್‍ನ ದಕ್ಷಿಣ ಮತ್ತು ಉತ್ತರ ವಲಯ ಸಮಿತಿಗಳ ವತಿಯಿಂದ ಸೋಮವಾರ ಕಾಪುವಿ ಪೇಟೆಯಲ್ಲಿ  ಬೃಹತ್ ಪ್ರತಿಭಟನೆ ನಡೆಯಿತು. 

ಕಾಪು ವಿದ್ಯಾನಿಕೇತನ ಶಾಲೆಯ ಬಳಿಯಿಂದ ಪೇಟೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪೇಟೆಯಲ್ಲಿ ಸಭೆ ನಡೆದ ಬಳಿಕ ತಹಶೀಲ್ದಾರ್ ಕಛೇರಿಗೆ ತೆರಳಿ ರಾಜ್ಯಪಾಲರಿಗೆ ಪ್ರತಿಭಟನಾ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜ, ರಾಜ್ಯದಲ್ಲಿ ಉಂಟಾದ ಪ್ರವಾಹಕ್ಕೆ ಹಣ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಒತ್ತಡ ಹಾಕುವಲ್ಲಿ ವಿಫಲವಾಗಿದೆ. ಈ ಸರ್ಕಾರದಿಂದ ಜನರ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ನುಡಿದ ಡಿಸೋಜ, ಈ ಸರ್ಕಾರ ಹೆಚ್ಚು ದಿನ ಬರುವುದಿಲ್ಲ ಎಂದು ಭವಿಷ್ಯ ನುಡಿದರು.

ದಕ್ಷಿಣ ಭಾರತದಲ್ಲಿ ಹತ್ತಾರು ಭಾಷೆಗಳಿವೆ. ಈ ಭಾಷೆಗಳನ್ನು ಅವಲಂಭಿತರಾಗಿರುವ ಕೋಟ್ಯಂತರ ಜನರಿದ್ದಾರೆ. ಹಿಂದಿ ಹೇರಿಕೆಯ ಮೂಲಕ ದಕ್ಷಿಣ ಭಾರತ ರಾಜ್ಯಗಳ ಭಾಷಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಐವನ್ ಡಿಸೋಜ ಹೇಳಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಮರಳುಗಾರಿಕೆಯ ಬಗ್ಗೆ  ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕರಾವಳಿಯ ಸಂಸದರು ಮತ್ತು ಶಾಸಕರು ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಜನ ಸಾಮಾನ್ಯರ ಮೇಲೆ ಹೊರೆಯಾಗುವಂತಹ ನೂತನ ವಾಹನ ಕಾಯ್ದೆಯನ್ನು ಜಾರಿಗೊಳಿಸಿ ಭಾರೀ ದಂಡ ವಸೂಲಿ ಮಾಡುತ್ತಿರುವ ಸರ್ಕಾರದ ಜನವಿರೋಧಿ ಧೋರಣೆ ಖಂಡನೀಯವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಂಡರಾದ ಗೋಪಾಲ ಪೂಜಾರಿ ಬೈಂದೂರು, ಶಕುಂತಳಾ ಶೆಟ್ಟಿ ಪುತ್ತೂರು, ಯು.ಆರ್. ಸಭಾಪತಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು,  ವಿಲ್ಸನ್ ರೋಡ್ರಿಗಸ್, ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ವಲಯ ಸಮಿತಿ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ಉತ್ತರ ವಲಯ ಸಮಿತಿ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ, ಕಾಪು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಸಾಧಿಕ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್,  ಯು.ಸಿ. ಶೇಖಬ್ಬ, ದಿನೇಶ್ ಕೋಟ್ಯಾನ್, ಸುನೀತಾ ಶೆಟ್ಟಿ, ಶಿವಾಜಿ ಸುವರ್ಣ, ವೆರೋನಿಕಾ ಕರ್ನೇಲಿಯೋ, ಎಂ.ಪಿ. ಮೊಯ್ದಿನಬ್ಬ, ವೈ. ಸುಕುಮಾರ್, ಹರೀಶ್ ಕಿಣಿ, ರಮೇಶ್ ಕಾಂಚನ್, ದಿನೇಶ್ ಪುತ್ರನ್, ದಿವಾಕರ ಕುಂದರ್, ಗಣೇಶ್ ಕೋಟ್ಯಾನ್,  ಹರೀಶ್ ಕಿಣಿ, ದೀಪಕ್ ಕುಮಾರ್ ಎರ್ಮಾಳ್, ರಾಜೇಶ್ ರಾವ್, ಅಬ್ದುಲ್ ಅಝೀಝ್ ಹೆಜಮಾಡಿ, ಪ್ರಭಾ ಶೆಟ್ಟಿ, ಹರೀಶ್ ನಾಯಕ್, ಫಾರೂಕ್ ಚಂದ್ರನಗರ, ಅಮೀರ್ ಮಹಮ್ಮದ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News