ಅಯೋಧ್ಯೆ ಪ್ರಕರಣದ ವಿಚಾರಣೆ ನೇರ ಪ್ರಸಾರ: ಸಾಧ್ಯಾಸಾಧ್ಯತೆ ತಿಳಿಸುವಂತೆ ಸುಪ್ರೀಂ ಸೂಚನೆ

Update: 2019-09-16 16:49 GMT

  ಹೊಸದಿಲ್ಲಿ, ಸೆ.16: ಅಯೋಧ್ಯೆ ಪ್ರಕರಣದ ವಿಚಾರಣೆಯ ಕಾರ್ಯಕಲಾಪದ ನೇರ ಪ್ರಸಾರ ನಡೆಸಲು ಸಾಧ್ಯವೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್‌ನ ನ್ಯಾಯಪೀಠ ನೋಂದಣಿ ಕಚೇರಿಗೆ ತಿಳಿಸಿದೆ.

   ನೇರ ಪ್ರಸಾರವಾಗದ ಕಾರಣ ನ್ಯಾಯಾಲಯದ ಕಾರ್ಯಕಲಾಪದ ಬಗ್ಗೆ ಬಹಳ ಜನರಿಗೆ ತಿಳಿಯುವುದಿಲ್ಲ. ಆದ್ದರಿಂದ ನೇರಪ್ರಸಾರಕ್ಕೆ ಸೂಚಿಸುವಂತೆ ಕೋರಿ ಆರೆಸ್ಸೆಸ್ ಮುಖಂಡ ಕೆಎನ್ ಗೋವಿಂದಾಚಾರ್ಯ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅಯೋಧ್ಯೆ ಪ್ರಕರಣದ ಬಗ್ಗೆ ದೇಶದಾದ್ಯಂತ ಭಾರೀ ಕುತೂಹಲವಿದೆ. ಪ್ರಕರಣದ ವಿಚಾರಣೆಯ ನೇರಪ್ರಸಾರ ನಡೆಸಿದರೆ ಕೋಟ್ಯಾಂತರ ಜನರು ವೀಕ್ಷಿಸಬಹುದು. ಭಾರತದ ಸಂವಿಧಾನದಲ್ಲಿ ರಾಮನ ಚಿತ್ರವಿದೆ. ಆದ್ದರಿಂದ ಅಯೋಧ್ಯೆ ಪ್ರಕರಣದ ನೇರಪ್ರಸಾರದಿಂದ ಸಾಂವಿಧಾನಿಕ ದೇಶಭಕ್ತಿ ಪಾಲಿಸಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಬಹಿರಂಗ ನ್ಯಾಯಾಲಯದ ನೀತಿಯ ಹಿತಾಸಕ್ತಿಗೆ ಪೂರಕವಾಗಿ ಈ ಅರ್ಜಿ ಸಲ್ಲಿಸಲಾಗಿದೆ. ಕಲಾಪದ ನೇರಪ್ರಸಾರ ತಕ್ಷಣ ಸಾಧ್ಯವಾಗದಿದ್ದರೆ ಕನಿಷ್ಟ ಅದರ ವೀಡಿಯೊ ಚಿತ್ರೀಕರಣವನ್ನಾದರೂ ನಡೆಸಲು ಸೂಚಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News