ಜಿಪಂ ಕರ್ತವ್ಯಲೋಪದ ಬಗ್ಗೆ ನ್ಯಾಯಾಂಗ ಹೋರಾಟ: ಐವನ್ ಡಿಸೋಜಾ

Update: 2019-09-17 13:00 GMT

ಮಂಗಳೂರು, ಸೆ.17: ಹಳೆಯಂಗಡಿ ಗ್ರಾಮ ಪಂಚಾಯತ್ ಬರ್ಕಾಸ್ತುಗೊಳಿಸುವ ಜಿಲ್ಲಾ ಪಂಚಾಯತ್ ಆಡಳಿತದ ನಿರ್ದಾರ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಈ ಪ್ರಕರಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕರ್ತವ್ಯಲೋಪ ಎಸಗಿದ್ದಾರೆ. ಈ ಬಗ್ಗೆ ನ್ಯಾಯಾಂಗ ಹೋರಾಟ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.

ಬಿಜೆಪಿ ಆಡಳಿತದ ದ.ಕ. ಜಿಲ್ಲಾ ಪಂಚಾಯ್ತಿಯು ಹಳೆಯಂಗಡಿ ಗ್ರಾಮ ಪಂಚಾಯ್ತಿಯನ್ನು ಬರ್ಕಾಸ್ತುಗೊಳಿಸುವ ನಿರ್ಣಯ ಮಾಡಿದ್ದು ರಾಜಕೀಯ ಸೇಡಿನ ನಡೆ. ಒಂದಿಬ್ಬರ ಸ್ವಾರ್ಥಕ್ಕಾಗಿ ಏಕಾಏಕಿ ಕಾನೂನು ಬಾಹಿರವಾಗಿ ಕೈಗೊಂಡಿರುವ ಈ ನಿರ್ಣಯದಿಂದ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡಿದೆ. ಆದ್ದರಿಂದ ರಾಜ್ಯ ಸರಕಾರ ಕೂಡಲೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀಡಿದ ಸೂಚನೆಯನ್ನೂ ಪಾಲಿಸದೆ ಏಕಾಏಕಿಯಾಗಿ ಬರ್ಕಾಸ್ತುಗೊಳಿಸಿರುವುದು ಖೇದಕರ. ಹಿರೇಬಂಡಾಡಿ ಪ್ರಕರಣದಿಂದ ಇವರಿಗೆ ಇನ್ನೂ ಬುದ್ದಿ ಬಂದಿಲ್ಲ. ಅಧಿಕಾರ ವಿಕೇಂದ್ರೀಕರಣದ ಭಾಗವಾದ ಗ್ರಾಮ ಪಂಚಾಯತ್‌ನಲ್ಲಿ ಕೆಲಸ ಮಾಡುವವರಿಗೆ ಶಕ್ತಿ ತುಂಬಿಸುವುದು ಬಿಟ್ಟು ಒಂದಿಬ್ಬರ ಸ್ವಾರ್ಥಕ್ಕಾಗಿ ಪಂಚಾಯತನ್ನೇ ಬರ್ಕಾಸ್ತು ಮಾಡುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.

ಚುನಾಯಿತ ಆಡಳಿತವನ್ನು ಬರ್ಕಾಸ್ತುಗೊಳಿಸಿದ್ದು ರಾಜ್ಯದಲ್ಲೇ ಅಪರೂಪವಾಗಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಲಾಗಿದೆ. ಈ ಕರಾಳ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲಿದ್ದೇವೆ. ಅಲ್ಲದೆ, ಮುಂದಿನ ಅಧಿವೇಶನದಲ್ಲಿ ಈ ವಿಚಾರದ ಕುರಿತು ನಿಲುವಳಿ ಮಂಡನೆ ಮಾಡಿ ರಾಜ್ಯದ ಗಮನ ಸೆಳೆಯುವುದಾಗಿ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಕಾಯ್ದೆಯ ಸೆಕ್ಷನ್ 268ರ ಪ್ರಕಾರ ಯಾವುದೇ ಪಂಚಾಯ್ತಿಯನ್ನು ವಿಸರ್ಜನೆ ಮಾಡುವ ಮೊದಲು ಅದನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿ ನಂತರ ವಿಸರ್ಜಿಸಬೇಕು. ಅದಕ್ಕೆ ಸೂಕ್ತ ಅವಧಿ ನಿಗದಿಪಡಿಸಬೇಕು. ಎರಡೂ ಕಡೆಯವರನ್ನು ಕರೆಸಿ ಮಾತುಕತೆ ನಡೆಸಬೇಕು. ಜಿಲ್ಲಾ ಪಂಚಾಯ್ತಿ ಏಕಾಏಕಿ ಗ್ರಾಪಂ ಬರ್ಕಾಸ್ತುಗೊಳಿಸಿದ್ದು ಕಾಯ್ದೆ ಉಲ್ಲಂಘನೆಯ ಗಂಭೀರ ಪ್ರಕರಣವಾಗಿದೆ ಎಂದು ಹೇಳಿದರು.

2017-18ರಲ್ಲಿ 12 ಸಾಮಾನ್ಯ ಸಭೆ ಮಾಡಬೇಕಿತ್ತು ಎಂಬ ಕಾರಣ ನೀಡಿದ್ದಾರೆ. ಆದರೆ 3 ಸಾಮಾನ್ಯ ಸಭೆ, 2 ವಿಶೇಷ ಸಭೆ, 2 ಗ್ರಾಮ ಸಭೆಗಳು ನಡೆದಿವೆ. ಮಾರ್ಚ್ 12ರಿಂದ ಮೇ 23ರವರೆಗೆ ಮೂರು ತಿಂಗಳು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಭೆ ನಡೆದಿಲ್ಲ. ನಂತರದ 2 ತಿಂಗಳು ಗ್ರಾಪಂ ಪಿಡಿಒ ಗ್ರಾಪಂ ಕಚೇರಿಗೆ ಬಂದದ್ದು ಎರಡೇ ಬಾರಿ (ಪೂರ್ಣಕಾಲಿಕ ಪಿಡಿಒ ಇರಲಿಲ್ಲ). 5 ತಿಂಗಳು ಸಭೆ ಮಾಡಲೇ ಸಾಧ್ಯವಾಗಿಲ್ಲ. ತಿಂಗಳ ಹಿಂದೆ ಪೂರ್ಣಕಾಲಿಕ ಪಿಡಿಒ ನೇಮಕವಾದ ಮೇಲೆ 1 ಸಾಮಾನ್ಯ ಸಭೆ, 1 ವಿಶೇಷ ಸಭೆ, 1 ತುರ್ತು ಸಭೆ, 1 ಗ್ರಾಮ ಸಭೆ ನಡೆದಿದೆ. ಇದು ಯಾರ ತಪ್ಪು? ಯಾರ ತಪ್ಪಿಗೆ ಯಾರಿಗೆ ಶಿಕ್ಷೆ ನೀಡಿದ್ದೀರಿ ಎಂದು ಐವನ್ ಪ್ರಶ್ನಿಸಿದರು.

ಒಂದು ವೇಳೆ ಗ್ರಾಪಂ ಸಭೆ ನಡೆಸಲು ವಿಫಲವಾದರೆ ತಾಪಂ ಕಾರ್ಯ ನಿರ್ವಹಣಾಧಿಕಾರಿ ಸಭೆ ಕರೆಯಬಹುದು ಎಂಬುದು ನಿಯಮಗಳಲ್ಲಿದೆ. ಅದನ್ನೇಕೆ ಪ್ರಶ್ನಿಸಿಲ್ಲ. ಅಧಿಕಾರಿ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ. ಯಾರ ತಪ್ಪಿಗಾಗಿ ಯಾರಿಗೆ ಶಿಕ್ಷೆ ಎಂದು ಅವರು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಕುಮಾರಿ ಶೆಟ್ಟಿ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹೀಂ, ಸದಸ್ಯಪರಾದ ಶಾಹುಲ್ ಹಮೀದ್, ಎಂ.ಎಸ್. ಮುಹಮ್ಮದ್, ಪ್ರಮನುಖರಾದ ವಸಂತ್, ಅಶ್ವಿನ್ ಪಿರೇರಾ, ಸವದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News