ಉಡುಪಿ ಜಿಲ್ಲೆಯಲ್ಲಿ 2,67,450 ಮಕ್ಕಳಿಗೆ ಜಂತುಹುಳು ಮಾತ್ರೆ ವಿತರಣೆ: ಡಿಸಿ

Update: 2019-09-17 15:19 GMT

 ಉಡುಪಿ, ಸೆ.17: ಜಿಲ್ಲೆಯಲ್ಲಿ ಸೆ.25ರಂದು ನಡೆಯುವ ಜಂತುಹುಳು ನಿವಾರಣಾ ದಿನದಂದು 1 ರಿಂದ 19 ವರ್ಷದೊಳಗಿನ 2,67,450 ಮಕ್ಕಳಿಗೆ ಉಚಿತವಾಗಿ ಜಂತುಹುಳು ನಿವಾರಣಾ ಅಲ್ಬೇಂಡಾರೆಲ್ ಮಾತ್ರೆ ವಿತರಿಸುವ ಗುರಿ ಹೊಂದಿದ್ದು, ಸಂಬಂದಪಟ್ಟ ಎಲ್ಲಾ ಇಲಾಖೆಗಳು ಶೇ.100 ಸಾಧನೆಗೆ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಜಿಲ್ಲೆಯಲ್ಲಿ 63910 ಅಂಗನವಾಡಿ ಮಕ್ಕಳು, ಒಂದರಿಂದ 10ನೇ ತರಗತಿವರೆಗೆ 159521, ಪಿಯುಸಿಯ 29040, ಶಾಲೆಯಿಂಧ ಹೊರಗುಳಿದಿರುವ 1829, ಡಿಪ್ಲಮೋದ 2210, ಐಟಿಐ ಕಾಲೇಜಿನ 1870, ನರ್ಸಿಂಗ್ ಕಾಲೇಜಿನ 1135 ಹಾಗೂ 7745 ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡುವ ಗುರಿ ಹೊಂದಲಾಗಿದೆ ಎಂದರು.

ಜಂತುಹುಳು ಸಮಸ್ಯೆಯಿಂದ ಮಕ್ಕಳಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ರಕ್ತಹೀನತೆ ಅಪೌಷ್ಠಿಕತೆ, ಓದಿನಲ್ಲಿ ಏಕಾಗ್ರತೆ ಕಡಿಮೆ, ಅನಾರೋಗ್ಯದ ಸಮಸ್ಯೆಗಳು ಕಾಣಿಸಿ ಕೊಳ್ಳಲಿದ್ದು, ಇದರಿಂದ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಅಲ್ಲದೇ ಅನಾರೋಗ್ಯದ ಕಾರಣ ಶಾಲೆಗೆ ಗೈರು ಹಾಜರಾಗುವುದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಎಲ್ಲಾ ಸರಕಾರಿ, ಖಾಸಗಿ, ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿ ದಂತೆ ಎಲ್ಲಾ ಶಾಲಾ ಕಾಲೇಜು ಮತ್ತು ಅಂಗನವಾಡಿಗಳಲ್ಲಿ ಜಂತುಹುಳು ಮಾತ್ರೆ ನೀಡಲು ಸಿದ್ದತೆ ಮಾಡಲಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯ ಕರ್ತೆಯರಿಗೆ ಈ ಕುರಿತು ತರಬೇತಿ ನೀಡಲಾಗಿದೆ. ಎಲ್ಲಾ ಶಾಲೆಗಳ ಶಿಕ್ಷಕರಿಗೆ ಸಹ ಅಗತ್ಯ ತರಬೇತಿಯನ್ನು ಆರೋಗ್ಯ ಇಲಾಖೆಯ ಮೂಲಕ ನೀಡಲಾಗು ತ್ತಿದ್ದು, ಮಾತ್ರೆಗಳನ್ನು ಸರಬರಾಜು ಮಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಸುರಕ್ಷಿತ ಕೈ ತೊಳೆಯುವ ವಿಧಾನದ ಬಗ್ಗೆ ಕೂಡ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ಅವರು ಹೇಳಿದರು.

ಜಂತುಹುಳು ನಿವಾರಣಾ ಮಾತ್ರೆಗಳು ಯಾವುದೇ ಅಡ್ಡ ಪರಿಣಾಮ ಬೀರದೆ, ಸಂಪೂರ್ಣ ಸುರಕ್ಷತೆಯಿಂದ ಕೂಡಿದೆ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ತೆಗೆದುಕೊಳ್ಳು ಸೂಚಿಸಬೇಕು. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಂತುಹುಳು ನಿವಾರಣಾ ಅಲ್ಬೇಂಡಾ ರೆಲ್ ಮಾತ್ರೆ ಲಭ್ಯವಿದೆ ಎಂದು ಅವರು ತಿಳಿಸಿದರು.

 ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವ ಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಯಾವುದೇ ಜಂತುಹುಳು ನಿವಾರಣಾ ಮಾತ್ರೆಯಿಂದ ಯಾರೂ ವಂಚಿಂತ ರಾಗದಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶೋಕ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಎಂ.ಜಿ.ರಾಮ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News