ಸೌದಿಯಿಂದ ಭಾರತಕ್ಕೆ ತೈಲ ಪೂರೈಕೆಯಲ್ಲಿ ಯಾವುದೇ ಅಡ್ಡಿ ಇಲ್ಲ

Update: 2019-09-17 16:25 GMT

ಹೊಸದಿಲ್ಲಿ, ಸೆ. 17: ಕಳೆದ ವಾರ ಎರಡು ತೈಲ ಸ್ಥಾವರಗಳ ಮೇಲೆ ಡ್ರೋನ್ ದಾಳಿ ನಡೆಸಿದ ಹೊರತಾಗಿಯೂ ಸೌದಿ ಅರೇಬಿಯಾದಿಂದ ತೈಲ ಪೂರೈಕೆಯಲ್ಲಿ ಯಾವುದೇ ಅಡ್ಡಿ ಉಂಟಾಗದು. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹೊಂದಿಕೊಂಡು ತೈಲ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸೌದಿಯ ಅರಾಮ್ಕೊ ತೈಲ ಸ್ಥಾವರದ ಮೇಲೆ ಹೌಥಿ ಬಂಡುಕೋರರು ನಡೆಸಿದರೆನ್ನಲಾದ ಡ್ರೋನ್ ದಾಳಿಯ ಪರಿಣಾಮ ಸೌದಿ ಅರೇಬಿಯಾದ ಅರ್ಧದಷ್ಟು ತೈಲ ಸಾಮರ್ಥ್ಯ ಕುಸಿದಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ತೈಲ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ತೈಲ ಪೂರೈಕೆಯಲ್ಲಿ ಯಾವುದೇ ಅಡೆತಡೆ ಉಂಟಾಗುವುದಿಲ್ಲ ಎಂದು ಸೌದಿ ಅರೇಬಿಯಾ ರಾಷ್ಟ್ರ ಸ್ವಾಮಿತ್ವದ ಅರಾಮ್ಕೊದಿಂದ ಭಾರತ ಖಾತರಿ ಹೊಂದಿದೆ. ನಿನ್ನೆ ತೈಲ ಟ್ಯಾಂಕರ್ ಭಾರತಕ್ಕೆ ಹೊರಟಿದೆ ಎಂದು ಮೂಲಗಳು ತಿಳಿಸಿವೆ.

ನಾವು ಕಾಯುತ್ತಿದ್ದೇವೆ ಹಾಗೂ ಪರಿಸ್ಥಿತಿ ಅವಲೋಕಿಸುತ್ತಿದ್ದೇವೆ. ಭಾರತಕ್ಕೆ ತೈಲ ಪೂರೈಕೆಯಲ್ಲಿ ಸಮಸ್ಯೆ ಉಂಟಾಗುತ್ತದೊ ಇಲ್ಲವೊ ಎಂಬ ಬಗ್ಗೆ ನಾವು ಎರಡು ವಾರಗಳಲ್ಲಿ ಸ್ಪಷ್ಟ ಚಿತ್ರಣ ಪಡೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News