ಕೊಲ್ಲೂರು ಅರಣ್ಯದಲ್ಲಿ ಟೆಂಟ್ ಪತ್ತೆ: ಕೂಂಬಿಂಗ್ ಕಾರ್ಯಾಚರಣೆ

Update: 2019-09-17 16:46 GMT

ಕೊಲ್ಲೂರು, ಸೆ.17: ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಡಾಲಿ ಎಂಬ ಅರಣ್ಯದಲ್ಲಿ ಟಾರ್ಪಲ್‌ನಿಂದ ನಿರ್ಮಿಸಿದ ಟೆಂಟ್ ಸೆ.16ರಂದು ಪತ್ತೆಯಾಗಿದ್ದು, ಈ ಸಂಬಂಧ ಇಂದು ನಕ್ಸಲ್ ನಿಗ್ರಹ ಪಡೆ ಹಾಗೂ ಸ್ಥಳೀಯ ಪೊಲೀಸರು ಕೂಬಿಂಗ್ ಕಾರ್ಯಾಚರಣೆ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಕೊಲ್ಲೂರಿನಿಂದ ಸುಮಾರು ನಾಲ್ಕು ಕಿ.ಮೀ. ದೂರದ ಅರಣ್ಯದಲ್ಲಿ ನಿನ್ನೆ ಸಂಜೆ ಟಾರ್ಪಲ್‌ನಿಂದ ನಿರ್ಮಿಸಿದ ಟೆಂಟ್ ಪತ್ತೆಯಾಗಿದ್ದು, ಅದರೊಳಗೆ ಚಪ್ಪಲಿ, ಕೊಡೆ, ಬ್ಯಾಗ್, ಪಾತ್ರೆಗಳು, ಬ್ರೆಡ್ ಪ್ಯಾಕೆಟ್‌ಗಳು ಕಂಡುಬಂದಿದ್ದವು. ಆದರೆ ಅಲ್ಲಿ ಯಾರು ಜನ ವಾಸವಾಗಿಲ್ಲದೆ ಇರುವುದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಪೊಲೀಸರಿಗೆ ತಿಳಿಸಿದ್ದು, ಅದ ರಂತೆ ನಕ್ಸಲ್ ನಿಗ್ರಹ ಪಡೆ ಮತ್ತು ಸ್ಥಳೀಯ ಪೊಲೀಸ್ ತಂಡ ಸ್ಥಳದಲ್ಲಿ ಕೂಬಿಂಗ್ ಕಾರ್ಯಾಚರಣೆ ನಡೆಸಿದೆ. ಆ ವೇಳೆ ಟೆಂಟ್ ಒಳಗೆ ಪತ್ತೆಯಾಗದ ಬ್ಯಾಗ್ ಪರಿಶೀಲಿಸಿದಾಗ ಕೆಲವೊಂದು ಬಟ್ಟೆ ದೊರೆತಿದೆ. ಸ್ಥಳೀಯ ಮಾಹಿತಿ ನೀಡಿದಂತೆ ಈ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಪುಸ್ತಕ ಹಿಡಿದುಕೊಂಡು ತಿರುಗಾಡುತ್ತಿದ್ದರೆನ್ನಲಾಗಿದೆ. ಆದರೆ ಸುತ್ತಮುತ್ತಲು ಪೊಲೀಸರು ಪರಿಶೀಲಿಸಿದಾಗ ಅಂತಹ ಯಾವುದೇ ವ್ಯಕ್ತಿ ಕಂಡುಬಂದಿಲ್ಲ.

‘ಟೆಂಟ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎಎನ್‌ಎಫ್ ಹಾಗೂ ಸ್ಥಳೀಯ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದು, ಅಂತಹ ಯಾವುದೇ ನಕ್ಸಲೀಯರಿಗೆ ಸಂಬಂಧಿಸಿದ ಕುರುಹುಗಳು ಅಲ್ಲಿ ಕಂಡುಬಂದಿಲ್ಲ. ಇದನ್ನು ಬೇರೆ ಕಡೆಯಿಂದ ಬಂದಿರುವ ಅಪರಿಚಿತ ವ್ಯಕ್ತಿಯೊಬ್ಬರು ನಿರ್ಮಿಸಿರುವ ಬಗ್ಗೆ ಶಂಕೆ ಇದೆ. ಈ ಪರಿಸರ ನಕ್ಸಲ್ ಸಂಪರ್ಕ ಇರುವ ಪ್ರದೇಶ ಆಗಿಲ್ಲ ಮತ್ತು ದಟ್ಟ ಅರಣ್ಯ ಕೂಡ ಅಲ್ಲ’ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News