ಕಿನ್ನಿಗೋಳಿಯಲ್ಲಿ ಬಸ್ಸಿಗೆ ಕಲ್ಲು ತೂರಾಟ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2019-09-17 17:16 GMT
ಶಂಶೀರ್, ರಿಯಾಝ್, ಸತ್ತಾರ್

ಮುಲ್ಕಿ:ಇಲ್ಲಿನ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಹಾಗೂ ಕಟೀಲು ಪರಿಸರದಲ್ಲಿ ರಾತ್ರಿ ಹೊತ್ತು ನಿಲ್ಲಿಸಿದ್ದ ಒಟ್ಟು 5 ಬಸ್ಸುಗಳಿಗೆ ಕಳೆದ ಸೆ.4ರ ಮುಂಜಾನೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಮುಲ್ಕಿ ಹಾಗೂ ಬಜ್ಪೆ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಬಂದಿಸಿದ್ದಾರೆ. ಕಲ್ಲು ತೂರಾಟಕ್ಕೆ ಬಳಸಿದ್ದೆನ್ನಲಾದ ಕಾರನ್ನುಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಬುಡೋಳಿ ಪೆರಾಜೆ ನಿವಾಸಿಗಳಾದ ಶಂಶೀರ್(27),ಅಬ್ದುಲ್ ಸತ್ತಾರ್(21)ನರಿಕೊಂಬು ನೆಹ್ರೂ ನಗರ ನಿವಾಸಿ ಮಹಮ್ಮದ್ ರಿಯಾಝ್(28) ಬಂಧಿತ ಆರೋಪಿಗಳು.

ಸೆ.4ರಂದು ಮುಂಜಾನೆ ಕಿನ್ನಿಗೊಳಿ ಪೆಟ್ರೋಲು ಬಂಕ್ ಬಳಿ ನಿಲ್ಲಿಸಿದ್ದ ಮೂರು ಬಸ್ಸು ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿಯ ಬಟ್ಟಕೋಡಿ ಹಾಗೂ ಕಟೀಲು ಕಾಲೇಜು ಬಳಿ ನಿಲ್ಲಿಸಿದ್ದ ಬಸ್ಸುಗಳ ಗಾಜಿಗೆ ಕಲ್ಲೆಸೆದು ಹಾನಿಗೊಳಿಸಲಾಗಿತ್ತು.

ಈ ಕೃತ್ಯದ ದೃಶ್ಯಾವಳಿ ಕಿನ್ನಿಗೋಳಿ ಪೆಟ್ರೋಲು ಬಂಕ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದಲ್ಲಿ ಮುಲ್ಕಿ ಹಾಗೂ ಬಜ್ಪೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು ಉತ್ತರ ಉಪ ವಿಬಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಮುಲ್ಕಿ ಠಾಣಾ ನಿರೀಕ್ಷಕರಾದ ಅನಂತ ಪದ್ಮನಾ, ಪೊಲೀಸ್ ಉಪನಿರೀಕ್ಷಕ ಶೀತಲ್ ಅಲಗೂರು ಹಾಗೂ ಮುಲ್ಕಿ ಠಾಣಾ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News