ಮರಳು ದೊರೆಯದಿದ್ದಲ್ಲಿ ಸೆ.23ರಿಂದ ಅನಿರ್ದಿಷ್ಟಾವಧಿ ಧರಣಿ

Update: 2019-09-18 12:32 GMT

ಉಡುಪಿ, ಸೆ.18: ಉಡುಪಿ ಜಿಲ್ಲೆಯಲ್ಲಿ ತೀವ್ರ ಮರಳು ಕೊರತೆಯಿಂದ ನಿರ್ಮಾಣ ಕ್ಷೇತ್ರ ತೀವ್ರ ಬಿಕ್ಕಟ್ಟಿನಲ್ಲಿದೆ. ಸೆ.21ರೊಳಗೆ ಮರಳು ದೊರೆಯದಿದ್ದಲ್ಲಿ ಸೆ.23ರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿ ಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಸಂಚಾಲಕ ಸುರೇಶ್ ಕಲ್ಲಾಗರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ಎರಡು ಮೂರು ವರ್ಷಗಳಿಂದ ಈ ಪರಿಸ್ಥಿತಿ ಮುಂದುವರೆದಿದೆ. ರಾಜ್ಯದಲ್ಲಿ ಸರಕಾರ ಬದಲಾವಣೆಯಾಗಿ ಕೋಟ ಶ್ರೀನಿವಾಸ ಪೂಜಾರಿ ಮಂತ್ರಿಯಾದ ಬಳಿಕ 10 ದಿನಗೊಳಗೆ ಮರಳು ಸಿಗುತ್ತದೆ ಎಂದು ಘೋಷಿಸಿ ದ್ದರು. ಇದಕ್ಕೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಕೂಡ ಧ್ವನಿಗೂಡಿಸಿದ್ದರು. ಆದರೆ ಇಲ್ಲಿಯವರೆಗೆ ಮರಳು ದೊರೆತಿಲ್ಲ ಎಂದರು.

ಸಮಿತಿಯ ಇನ್ನೋರ್ವ ಸಂಚಾಲಕ ಶೇಖರ ಬಂಗೇರ ಮಾತನಾಡಿ, ಮರಳಿಗೆ ಸಂಬಂಧಿಸಿದ ಏಳು ಮಂದಿಯ ಸಮಿತಿ ಸಭೆಯಲ್ಲಿ ಕಟ್ಟಡ ಕಾರ್ಮಿಕರ ಪ್ರತಿನಿಧಿಯನ್ನು ಸೇರಿಸಿಕೊಳ್ಳಬೇಕು. ಈ ಸಮಿತಿ ಸಭೆಯು ಗೌಪ್ಯ ವಾಗಿ ನಡೆಯುತ್ತಿದ್ದು, ಇದರಲ್ಲಿ ಯಾರೆಲ್ಲ ಸದಸ್ಯರಿದ್ದಾರೆ. ಸಭೆಯಲ್ಲಿ ತೆಗೆದು ಕೊಂಡ ನಿರ್ಣಯಗಳ ಬಗ್ಗೆ ಬಹಿರಂಗಗೊಳಿಸಬೇಕು. ಈ ಸಭೆಗೆ ಮಾಧ್ಯಮದ ವರಿಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ವಿಧಾನಸೌಧ ಚಲೋ:ಕೇಂದ್ರ ಸರಕಾರದ ಉದ್ದೇಶಿತ ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆಯನ್ನು ಕೈಬಿಡುವಂತೆ ಒತ್ತಾಯಿಸಿ ಹಾಗೂ ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನು ಮತ್ತು ಕಟ್ಟಡ ಕಾರ್ಮಿಕ ಮಂಡಳಿ ಹಾಗೂ ಕಾರ್ಮಿಕರ ಬದುಕನ್ನು ರಕ್ಷಿಸಲು ಒತ್ತಾಯಿಸಿ ಸೆ.19ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಕಟ್ಟಡ ಕಾರ್ಮಿಕರ ವಿಧಾನಸೌಧ ಚಲೋ ಕಾರ್ಯಕ್ರಮ ದಲ್ಲಿ ಉಡುಪಿ ಜಿಲ್ಲೆಯ ನೂರಾರು ಕಾರ್ಮಿಕರು ಭಾಗವಹಿಸಲಿರುವರು ಎಂದು ಸುರೇಶ್ ಕಲ್ಲಾಗರ್ ಮಾಹಿತಿ ನೀಡಿದರು.

ಈ ಹೊಸ ಮಸೂದೆ ಜಾರಿಯಾದರೆ ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನುಗಳು ರದ್ಧಾಗುತ್ತದೆ. ಈಗಾಗಲೇ ನೊಂದಣಿಯಾಗಿರುವ ಕೋಟ್ಯಂತರ ಕಾರ್ಮಿಕರ ಗುರುತಿನ ಚೀಟಿ ರದ್ಧಾಗಲಿದೆ. ರಾಜ್ಯದಲ್ಲಿ ಕಲ್ಯಾಣ ಮಂಡಳಿ ಬದಲು ಸಲಹಾ ಮಂಡಳಿ ರಚನೆಯಾಗಲಿದೆ. ರಾಜ್ಯದ ಎಂಟು ಕೋಟಿ ರೂ. ಸೇರಿದಂತೆ ದೇಶದ ವಿವಿಧ ಕಲ್ಯಾಣ ಮಂಡಳಿಗಳಲ್ಲಿ ಸಂಗ್ರಹಿಸ ಲಾದ ಒಟ್ಟು 70ಸಾವಿರ ಕೋಟಿ ರೂ. ಕೇಂದ್ರ ಸರಕಾರದ ಪಾಲಾಗಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಛಿಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮುಖಂಡ ಮೇಶ್ ಗುಲ್ವಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News