ಡಿ.31ಕ್ಕೆ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣ!

Update: 2019-09-18 13:32 GMT

ಮಂಗಳೂರು, ಸೆ.19: ನಾನಾ ರೀತಿಯ ಟೀಕೆ, ಟಿಪ್ಪಣಿ ಜತೆಗೆ ಅಪಹಾಸ್ಯಕ್ಕೆ ಗುರಿಯಾಗಿರುವ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಈ ವರ್ಷದ ಅಂತ್ಯಕ್ಕೆ (ಡಿಸೆಂಬರ್ 31) ಪೂರ್ಣಗೊಳ್ಳಲಿದೆಯಂತೆ! ಕಳೆದ ಸುಮಾರು ನಾಲ್ಕೈದು ವರ್ಷಗಳಿಂದ ಹಲವು ಗಡುವುಗಳ ಬಳಿಕ ಇದೀಗ ಮತ್ತೆ ಡಿಸೆಂಬರ್ 31 ಅಂತಿಮ ಗಡುವನ್ನು ಕಾಮಗಾರಿ ವಹಿಸಿರುವ ಗುತ್ತಿಗೆದಾರರಿಗೆ ನೀಡಲಾಗಿದೆ.

ಸಾಕಷ್ಟು ಗಡುವು, ಕ್ರಿಮಿನಲ್ ಪ್ರಕರಣದ ಎಚ್ಚರಿಕೆಯ ಅಂತಿಮ ಗಡುವಿನ ಹೊರತಾಗಿಯೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಇದೀಗ ಮತ್ತೆ ಡಿಸೆಂಬರ್ ಅಂತ್ಯದ ಗಡುವಿನ ಬಗ್ಗೆಯೂ ಅನುಮಾನ ಸಹಜ. ಹಾಗಿದ್ದರೂ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮತ್ತೊಂದು ಅಂತಿಮ ಗಡುವಿನ ಭರವಸೆ 2020ರ ಜನವರಿಯಿಂದಲಾದರೂ ಸಾರ್ವಜನಿಕರಿಗೆ ಮುಕ್ತಗೊಳ್ಳುವ ನಿರೀಕ್ಷೆ ಮೂಡಿಸಿದೆ.

ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ವಾರ್ತಾಭಾರತಿ ಪ್ರತಿನಿಧಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶು ಮೋಹನ್ ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ.

‘‘ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡಿಲ್ಲ. 2019ರ ಡಿಸೆಂಬರ್ 31ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಗುತ್ತಿಗೆ ವಹಿಸಿರುವವರು ಈ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಅವರಿಗೆ ದಂಡ ಹಾಕುವ ಬಗ್ಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮೇಲ್ಸೇತುವೆ ರಚನಾ ಕಾಮಗಾರಿ ಶೇ. 90ರಷ್ಟು ಬಹುತೇಕ ಪೂರ್ಣಗೊಂಡಿದೆ. ಉಳಿದಿರುವುದು ಮಣ್ಣು ತುಂಬಿಸುವ ಕೆಲಸ ಮಳೆಗಾಲದಲ್ಲಿ ಕೆಸರು ಆಗುವ ಈ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಹಣಕಾಸು ಮುಗ್ಗಟ್ಟಿನಿಂದಾಗಿ ಗುತ್ತಿಗೆದಾರರಿಗೆ ಸಮಸ್ಯೆಯಾಗಿತ್ತು. ನಾನು ಇದೀಗ ಬಂದ ಬಳಿಕ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದೇನೆ. ಸದ್ಯ ಅವರಿಗೆ ಹಣಕಾಸಿನ ತೊಂದರೆ ಇಲ್ಲ’’.

ಪಂಪ್‌ವೆಲ್ ಮೇಲ್ಸೇತುವೆಯು ಒಟ್ಟು 600 ಮೀಟರ್ ಉದ್ದ ಹಾಗೂ, 20 ಮೀಟರ್ ಅಗಲ ಹೊಂದಿದ್ದು, ಕಾಮಗಾರಿಗೆ 2010ರಲ್ಲಿಯೇ ಚಾಲನೆ ನೀಡಲಾಗಿತ್ತು. ಮೊದಲ ಆರು ವರ್ಷದಲ್ಲಿ ತೀವ್ರ ನಿಧಾನಗತಿಯಲ್ಲಿ ಸಾಗಿದ ಕಾಮಗಾರಿಯು ಕಳೆದ ಮೂರು ವರ್ಷಗಳ ಹಿಂದೆ ಸ್ವಲ್ಪ ಮಟ್ಟಿನ ವೇಗ ಪಡೆದಿತ್ತು. ಕಳೆದ ಬಾರಿಯ ಮಳೆಗಾಲದಲ್ಲಿ ಕಾಮಗಾರಿ ಮತ್ತೆ ಕುಂಟುತ್ತಾ ಸಾಗಿತ್ತು. ಹಾಗಿದ್ದರೂ 2019ರ ಜನವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್‌ರವರು ನವಯುಗ್ ಸಂಸ್ಥೆಗೆ ಒತ್ತಡ ಹೇರಿದ್ದರು. ಫೆಬ್ರವರಿಯಲ್ಲಿ ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ. ನವಯುಗ್ ಸಂಸ್ಥೆಯವರು ಈ ಹಿಂದೆಯೇ ಅನೇಕ ಬಾರಿ ಗಡುವು ನೀಡಿದ್ದರೂ, ಆ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಹೇಳಿಕೆ ನೀಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್‌ರವರು, ಕಳೆದ ಫೆಬ್ರವರಿ ಅಂತ್ಯಕ್ಕೆ ಈ ಗಡುವಿಗೆ ಪೂರ್ಣಗೊಳ್ಳದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನೀಡಿದ್ದರು!
ಆದರೆ ಆ ಗಡುವು ಕೂಡಾ ಸಾಧ್ಯವಾಗಾದಾಗ ಕಳೆದ ಫೆಬ್ರವರಿ 28ರಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಕಾರ್ಯದರ್ಶಿ ವೈಭವ್ ದಾಂಗೆಯವರು ಮಂಗಳೂರಿಗೆ ಭೇಟಿ ನೀಡಿ ಸಂಸದರ ಜತೆ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವೀಕ್ಷಣೆ ನಡೆಸಿದ್ದರು. 2019ರ ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅವರು ಕೂಡಾ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಕಾಮಗಾರಿ ಮಾತ್ರ ಪೂರ್ಣಗೊಂಡಿರಲಿಲ್ಲ. ಆ ಬಳಿಕ ಜೂನ್‌ನಿಂದ ಮಳೆ ಆರಂಭವಾಗಿ ಕಾಮಗಾರಿ ಸ್ಥಗಿತಗೊಂಡಿತ್ತು.

ಪಂಪ್‌ವೆಲ್ ಮೇಲ್ಸೇತುವೆಯ ಗರ್ಡರ್‌ನ ಮೇಲ್ಬಾಗದ 75 ಮೀಟರ್ ಕಾಮಗಾರಿ ಪೂರ್ಣಗೊಂಡಿದೆ.  ಓವರ್‌ನ ಎಕ್ಕೂರು ಕಡೆಯಿಂದ ಪಂಪ್‌ವೆಲ್‌ವರೆಗಿನ ಆರ್‌ಇ ವಾಲ್ ಜೋಡಣೆ ಕಾರ್ಯವೂ ನಡೆದಿದೆ. ಎಕ್ಕೂರು ಕಡೆಯಿಂದ ಮೇಲ್ಸೇತುವೆಗೆ ಸಮಾನಾಂತರವಾಗಿ ಮಣ್ಣು ಹಾಕುವ ಕಾಮಗಾರಿ ನಡೆದಿದೆ. ಕರ್ಣಾಟಕ ಬ್ಯಾಂಕ್ ಮುಂಭಾಗದಿಂದ ಮೇಲ್ಸೇತುವೆ ಜೋಡಣೆ ರಸ್ತೆಗೆ ಮಣ್ಣು ಅಗೆಯುವ ಕಾರ್ಯ ಇನ್ನೂ ಬಾಕಿ ಇದೆ. ಪಂಪ್‌ವೆಲ್‌ನಿಂದ ಎಕ್ಕೂರಿಗೆ ತೆರಳುವ ರಸ್ತೆ ಅಂಡರ್ ಪಾಸ್ ಕಾಮಗಾರಿ ಕೂಡಾ ಪೂರ್ಣಗೊಂಡಿದೆ.

ಜಾಲತಾಣದಲ್ಲಿ ಟ್ರೋಲ್ ಆದ ಪಂಪ್‌ವೆಲ್ ಮೇಲ್ಸೇತುವೆ!
ಕಳೆದ ಎರಡು ವರ್ಷಗಳಿಂದೀಚೆಗೆ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯನ್ನು ಮಾಡಿ ಟ್ರೋಲ್ ಆಗುತ್ತಿದೆ. ಅಪಹಾಸ್ಯಕ್ಕೂ ಗುರಿಯಾಗಿದೆ. ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ಟೀಕೆ ವ್ಯಕ್ತವಾಗಿದೆ. ಫೇಸ್‌ಬುಕ್‌ನಲ್ಲಿ ಟ್ರೆಂಡ್ ಆಗಿದ್ದ 10 ವರ್ಷದ ಚಾಲೆಂಜ್‌ನಲ್ಲಿ ಪಂಪ್‌ವೆಲ್ ಮೇಲ್ಸೇತುವೆ ಚಿತ್ರ ಬಳಸಿ ಕಳೆದ ಹತ್ತು ವರ್ಷಗಳ ಹಿಂದೆ ಇದ್ದ ಪಂಪ್‌ವೆಲ್ ವೃತ್ತ ಮತ್ತು ಈಗಿನ ಮೇಲ್ಸೇತುವೆ ಕಾಮಗಾರಿ ಸ್ಥಿತಿಯನ್ನು ಹೋಲಿಕೆ ಮಾಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದರ ಜತೆಯಲ್ಲೇ ಇತ್ತೀಚೆಗೆ ಇಂಜಿನಿಯರ್ ದಿನಾಚರಣೆಯ ಸಂದರ್ಭದಲ್ಲೂ ‘ಪಂಪ್‌ವೆಲ್ ಫ್ಲೈ ಓವರ್‌ನ ಇಂಜಿನಿಯರನ್ನು ಬಿಟ್ಟು ಉಳಿದೆಲ್ಲರಿಗೂ ಹ್ಯಾಪಿ ಇಂಜಿನಿಯರ್ಸ್ ಡೇ’ ಎಂಬ ಸಂದೇಶ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News