ಭಾರತೀಯರಿಗೆ ಇತಿಹಾಸ ಪ್ರಜ್ಞೆಯ ಕೊರತೆ ಇದೆ: ಡಾ.ಪುಂಡಿಕಾ ಗಣಪಯ್ಯ ಭಟ್

Update: 2019-09-18 13:37 GMT

ಮಂಗಳೂರು, ಸೆ.18: ಭಾರತದ ಇತಿಹಾಸದ ನಾಶಕ್ಕೆ ವಿದೇಶಿಯರ ಆಕ್ರಮಣವೇ ಆಗಬೇಕಾಗಿಲ್ಲ. ಸ್ವದೇಶೀಯರ ನಿರ್ಲಕ್ಷವೇ ಸಾಕು. ಭಾರತೀಯರಿಗೆ ಇತಿಹಾಸ ಪ್ರಜ್ಞೆಯ ಕೊರತೆ ಇದ್ದು, ಇದರಿಂದ ದೇಶದ ಇತಿಹಾಸ, ಪರಂಪರೆಯು ನಾಶವಾಗುತ್ತಿದೆ ಎಂದು ಹಿರಿಯ ಇತಿಹಾಸ ಸಂಶೋಧಕ ಡಾ.ಪುಂಡಿಕಾ ಗಣಪಯ್ಯ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಇತಿಹಾಸ ಅಕಾಡಮಿ ಬೆಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ವಿವಿ ಸ್ನಾತಕ ಮತ್ತು ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗವು ನಗರದ ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ 'ಇತಿಹಾಸ ಪರಂಪರೆ ಉಳಿಸಿ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಭಾರತೀಯರಿಗೆ ದೇಶದ ಇತಿಹಾಸದ ಬಗ್ಗೆ ಪ್ರೀತಿ ಹುಟ್ಟುತ್ತಿಲ್ಲ. ಇತಿಹಾಸದ ಬಗ್ಗೆ ಜ್ಞಾನವಿಲ್ಲ. ಅದರ ಮಹತ್ವ ತಿಳಿದಿಲ್ಲ.ಇತಿಹಾಸ ಅಂದರೆ ಹಳೆಯ ಪ್ರಾರ್ಥನಾ ಮಂದಿರಗಳು, ಬಂಗಲೆಗಳು, ಸ್ಮಾರಕಗಳು ಎಂಬ ಭಾವನೆ ಇದೆ. ಆಧುನಿಕತೆಗೆ ಒಗ್ಗಿಕೊಂಡ ಯುವ ಜನಾಂಗ ಇತಿಹಾಸ, ಪರಂಪರೆ ಉಳಿಸುವುದರ ಬಗ್ಗೆ ನಿರ್ಲಕ್ಷ ತಾಳಿದೆ. ಅವುಗಳ ಉಳಿವಿನ ಜಬಾಬ್ದಾರಿ ಸರಕಾರದ್ದೆಂಬ ಭಾವನೆ ಇದೆ. ಇದನ್ನು ತೊಡೆದು ಹಾಕಿ ದೇಶದ ಇತಿಹಾಸ ಪರಂಪರೆಯನ್ನು ಉಳಿಸಲು ಸ್ವತಃ ನಾವೇ ಪ್ರಯತ್ನಿಸಬೇಕಿದೆ ಎಂದು ಡಾ.ಪುಂಡಿಕಾ ಗಣಪಯ್ಯ ಭಟ್ ಹೇಳಿದರು.

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಲ್ಲಿ ನೋಂದಣಿಯಾದ ದೇವಸ್ಥಾನಗಳ ಸಂಖ್ಯೆ 35 ಸಾವಿರಕ್ಕೂ ಅಧಿಕವಿದೆ. ಅದರಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ 4 ಸಾವಿರಕ್ಕೂ ಅಧಿಕ ದೇವಸ್ಥಾನಗಳು ಸೇರಿವೆ. ಆ ಪೈಕಿ ಹೆಚ್ಚಿನವು ಕಣ್ಮರೆಯಾಗುವ ಅಪಾಯದಲ್ಲಿದೆ. ಈಗಾಗಲೆ ಅನೇಕ ಶಾಸನಗಳನ್ನು ಕೂಡ ಸ್ವತಃ ನಾವೇ ಮೂಲೆಪಾಲು ಮಾಡಿದ್ದೇವೆ. ನಗರದ ಅಭಿವೃದ್ಧಿಯ ಭರಾಟೆಯಲ್ಲೂ ಕೂಡ ಹೆಚ್ಚಿನ ಸ್ಮಾರಕಗಳಿಗೆ ಅಪಾಯ ಕಾದಿವೆ. ತುಳುನಾಡಿನ ದೇವಸ್ಥಾನಗಳಲ್ಲಿ ಗುಜರಾತ್, ತಮಿಳ್ನಾಡು ಮಾದರಿಯ ವಾಸ್ತುಶಿಲ್ಪಗಳನ್ನು ಕಾಣಬಹುದಾಗಿದೆ. ಇದನ್ನು ಸಾಂಸ್ಕೃತಿಕ ವಿಕೃತೀಕರಣವೆನ್ನದೆ ವಿಧಿಯಿಲ್ಲ ಎಂದು ಡಾ.ಪುಂಡಿಕಾ ಗಣಪಯ್ಯ ಭಟ್ ವಿಷಾದಿಸಿದರು.

ಮಂಗಳೂರು ವಿವಿ ಕುಲಪತಿ ಫ್ರೊ. ಪಿ ಸುಬ್ರಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಇರ್ವತ್ತೂರು, ಸ್ನಾತಕ ಇತಿಹಾಸ ವಿಭಾಗದ ಮುಖ್ಯಸ್ಥೆ ರಾಜೇಶ್ವರಿ ಸಿ. ಉಪಸ್ಥಿತರಿದ್ದರು. ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಡಾ. ಗಣಪತಿ ಗೌಡ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News