ಮೆಡಿಕಲ್ ಸೆಂಟರ್‌ಗಳ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆ

Update: 2019-09-18 13:50 GMT

ಮಂಗಳೂರು, ಸೆ.18: ನಗರದ ಸ್ಟೇಟ್‌ಬ್ಯಾಂಕ್ ಬಳಿಯ ಶಿವಂ ಮೆಡಿಕಲ್ ಸೆಂಟರ್ ಮತ್ತು ಲಾಲ್‌ಬಾಗ್ ಬಳಿಯ ಮೆಡಿಸ್ಟಾರ್ ಮೆಡಿಕಲ್ ಸೆಂಟರ್‌ಗಳ  ಅವ್ಯವಸ್ಥೆ ಹಾಗೂ ಮೋಸದ ದಂಧೆ ನಡೆಸುತ್ತಿದೆ ಎಂದು ಆರೋಪಿಸಿ ಸೌತ್ ಕರ್ನಾಟಕ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಶನ್ಸ್ ವತಿಯಿಂದ ಬುಧವಾರ ದ.ಕ.ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.

ದ.ಕ.ಜಿಲ್ಲೆಯಲ್ಲಿ ಶೇ.30ರಷ್ಟು ಯುವಕರು ವಿದೇಶಗಳಲ್ಲಿ ಅದರಲ್ಲೂ ಗಲ್ಫ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಈ ಸಂದರ್ಭ ಅವರಿಗೆ ಆರೋಗ್ಯ ತಪಾಸಣೆ (ಜಿಸಿಸಿ ಮೆಡಿಕಲ್) ಅಗತ್ಯವಿದೆ. ಈ ಮಧ್ಯೆ ನಗರದ ಎರಡು ಮೆಡಿಕಲ್ ಸೆಂಟರ್‌ಗಳು ವಿನಾಃ ಕಾರಣ ಜಿಸಿಸಿ ಮೆಡಿಕಲ್ ವರದಿಯಲ್ಲಿ ದೈಹಿಕ ಸಮಸ್ಯೆಯನ್ನು ಉಲ್ಲೇಖಿಸುವ ಮೂಲಕ ಯುವಕರ ಕೊಲ್ಲಿ ಉದ್ಯೋಗದ ಆಸೆಗೆ ಕೊಳ್ಳಿ ಇಡುತ್ತಿದ್ದಾರೆ. ಈ ಬಗ್ಗೆ ಈ ಎರಡು ಮೆಡಿಕಲ್ ಸೆಂಟರ್‌ಗಳ ಮಾಲಕರಲ್ಲಿ ಅಸೋಸಿಯೇಶನ್ಸ್‌ನ ಪದಾಧಿಕಾರಿಗಳು ಸ್ಪಷ್ಟನೆ ಕೇಳಿದಾಗ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇತ್ತೀಚೆಗೆ ಈ ಎರಡು ಮೆಡಿಕಲ್ ಸೆಂಟರ್‌ನಲ್ಲಿ ಪರೀಕ್ಷೆಗೊಳಪಟ್ಟ ಕೆಲವು ಯುವಕರ ಆರೋಗ್ಯದ ರಿಪೋರ್ಟ್‌ನಲ್ಲಿ ಅನರ್ಹ ಎಂದು ಬಂದಿದ್ದು, ಅದೇ ಯುವಕರು ಇತರ ಮೆಡಿಕಲ್ ಸೆಂಟರ್‌ನಲ್ಲಿ ಪರೀಕ್ಷೆ ಮಾಡಿಸಿದಾಗ ಯಾವುದೇ ತೊಂದರೆ ಇಲ್ಲ ಎಂಬುದು ಸಾಬೀತಾಗಿದೆ. ಒಮ್ಮೆ ಪರೀಕ್ಷೆಯಲ್ಲಿ ವಿಫಲವಾದರೆ ಮತ್ತೆ 21 ದಿನಗಳ ಕಾಲ ಕಾಯಬೇಕಾಗಿದೆ. ಇದರಿಂದ ತುರ್ತು ಗಲ್ಫ್ ರಾಷ್ಟ್ರಗಳಲ್ಲಿ ಕೆಲಸಕ್ಕೆ ಹೋಗುವವರಿಗೆ ಅಡ್ಡಿಯಾಗುತ್ತದೆ. ಮೆಡಿಕಲ್ ರಿಪೋರ್ಟ್‌ನಲ್ಲಿ ಅನ್‌ಫಿಟ್ ಎಂದು ತೋರಿಸಿದಲ್ಲಿ ಮೆಡಿಕಲ್‌ಗೆ ಕೊಡುವ ಶುಲ್ಕದಲ್ಲಿ 5 ಸಾವಿರ ರೂ. ಈ ಮೆಡಿಕಲ್‌ಗೆ ಸಿಗುತ್ತದೆ. ಫಿಟ್ ಎಂದು ತೋರಿಸಿದಲ್ಲಿ ಶುಲ್ಕದ ಅರ್ಧ ಮೊತ್ತವನ್ನು ಜಿಎಎಂಸಿಎ ಇದಕ್ಕೆ ಕೊಡಬೇಕಾಗುತ್ತದೆ. ಅಂದರೆ ಫಿಟ್‌ಗಿಂತ ಅನ್‌ಫಿಟ್ ಎಂದು ಮೆಡಿಕಲ್ ರಿಪೋರ್ಟ್‌ನಲ್ಲಿ ತೋರಿಸುವ ಮೂಲಕ ದಂಧೆಯನ್ನೇ ನಡೆಸಲಾಗುತ್ತದೆ. ಬೆಂಗಳೂರಿನಲ್ಲಿ ಆಯಾ ದಿನವೇ ಮೆಡಿಕಲ್ ರಿಪೋರ್ಟ್ ನೀಡಿದರೆ ಇಲ್ಲಿ ಮಾತ್ರ ಮರುದಿನ ನೀಡುವ ಪರಿಪಾಠವಿದೆ. ಈ ಬಗ್ಗೆ ಪ್ರಶ್ನಿಸಿದರೂ ಕೂಡ ಸೂಕ್ತ ರೀತಿಯಲ್ಲಿ ಇವರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಯನ್ನು ಭೇಟಿಯಾದ ಸೌತ್ ಕರ್ನಾಟಕ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಶನ್ಸ್‌ನ ಗೌರವಾಧ್ಯಕ್ಷ ರಮೇಶ್ ಪೂಜಾರಿ, ಗೌರವ ಸಲಹೆಗಾರ ಯೋಗೀಶ್ ಶೆಟ್ಟಿ ಜೆಪ್ಪು, ಅಧ್ಯಕ್ಷ ಸಿದ್ದೀಕ್ ಅಲ್‌ಬುಶ್ರಾ, ಕಾರ್ಯದರ್ಶಿ ಉಮರುಲ್ ಫಾರೂಕ್, ಮಾಧ್ಯಮ ಸಲಹೆಗಾರ ಝಕೀರ್ ಅವರನ್ನೊಳಗೊಂಡ ನಿಯೋಗವು ಈ ಎರಡು ಮೆಡಿಕಲ್ ಸೆಂಟರ್‌ನಲ್ಲಿ ಅನ್‌ಫಿಟ್ ಎಂದು ರಿಪೋರ್ಟ್ ಪಡೆಯುವ ಅಭ್ಯರ್ಥಿಗಳು 21 ದಿನದ ಬಳಿಕ ಬೇರೆ ಕಡೆ ಮೆಡಿಕಲ್ ಮಾಡಿಸಿಕೊಂಡು ಫಿಟ್ ಎಂದು ರಿಪೋರ್ಟ್ ಪಡೆದರೆ ಸಂತ್ರಸ್ತ ಅಭ್ಯರ್ಥಿಗೆ ಶುಲ್ಕ ಮರುಪಾವತಿಸಬೇಕು, ಈ ಬಗ್ಗೆ ಸೂಕ್ತ ಸಮಿತಿ ರಚಿಸಿ ಕಳೆದೊಂದು ವರ್ಷದಲ್ಲಿ ನಡೆದ ಅವ್ಯವಸ್ಥೆಯ ಬಗ್ಗೆ ತನಿಖೆ ನಡೆಸಬೇಕು, ಆಯಾ ದಿನವೇ ಮೆಡಿಕಲ್ ರಿಪೋರ್ಟ್ ನೀಡುವಂತೆ ವ್ಯವಸ್ಥೆ ಕಲ್ಪಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News