ಪುತ್ತೂರು: ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಶವವಾಗಿ ಪತ್ತೆ

Update: 2019-09-18 13:54 GMT

ಪುತ್ತೂರು: ಒಂಟಿ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ವ್ಯಕ್ತಿಯೊಬ್ಬರ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ. ಪುತ್ತೂರು ನಗರದ ಪಾಂಗಾಳಾಯಿ ಎಂಬಲ್ಲಿ ಮನೆಯೊಂದರಲ್ಲಿ ಏಕಾಂಗಿಯಾಗಿ ವಾಸ್ತವ್ಯವಿದ್ದ ಚಂದ್ರಶೇಖರ ಪೂಜಾರಿ (57) ಎಂಬವರು ಮೃತಪಟ್ಟ ವ್ಯಕ್ತಿ. 

ವೃತ್ತಿಯಲ್ಲಿ ಟೈಲರ್ ಆಗಿದ್ದ ಚಂದ್ರಶೇಖರ ಪೂಜಾರಿ ಕಳೆದ 10 ವರ್ಷಗಳಿಂದ ತನ್ನ ಮನೆಯಾದ ಪಾಂಗಾಳಾಯಿ ಮನೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದರು. ಕಳೆದ ಮೂರು ದಿನಗಳಿಂದ ಸ್ಥಳೀಯರಿಗೆ ದುರ್ವಾಸನೆ ಬರುತ್ತಿದ್ದು, ಬುಧವಾರ ಸ್ಥಳೀಯರಾದ ಮಹಿಳೆಯೊಬ್ಬರು ಚಂದ್ರಶೇಖರ ಅವರ ಮನೆಯ ಬಳಿಗೆ ಹೋಗಿ ಕರೆದಾಗ ಅಲ್ಲಿಂದ ವಿಪರೀತ ದುರ್ವಾಸನೆ ಬರುತ್ತಿತ್ತು. ಸಂದೇಹಗೊಂಡ ಸ್ಥಳೀಯರು ಈ ಬಗ್ಗೆ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇವರ ತಂದೆ ಪುತ್ತೂರು ಬಸ್ ನಿಲ್ದಾಣದ ಸಮೀಪ ಹಿಂದೂ ಮಿಲಿಟರಿ ಹೋಟೆಲ್ ನಡೆಸುತ್ತಿದ್ದ ಬಾಬು ಪೂಜಾರಿ ಅವರಿಗೆ 5 ಹೆಣ್ಣು ಮತ್ತು 5 ಗಂಡು ಮಕ್ಕಳು ಇದ್ದು, ಇದರಲ್ಲಿ 7ನೇಯವರಾದ ಚಂದ್ರಶೇಖರ ಪೂಜಾರಿ ಮಾನಸಿಕವಾಗಿ ಖನ್ನತೆಯಿಂದ ಬಳಲುತ್ತಿದ್ದರು ಎಂದು ಮೃತರ ಸಹೋದರಿ ಪುಷ್ಪಾ ಅವರು ತಿಳಿಸಿದ್ದಾರೆ. 

ಸೆಪ್ಟಂಬರ್ 7 ರಂದು ಚಂದ್ರಶೇಖರ ಪೂಜಾರಿ ಅವರ ಅಣ್ಣ ಪ್ರಭಾಕರ್ ಬೆಂಗಳೂರಿನಿಂದ ಬಂದು ಒಂದುದಿನ ಇಲ್ಲಿ ವಾಸವಿದ್ದು, ಮರುದಿನ ವಾಪಾಸ್ಸಾಗಿದ್ದರು. ಆ ನಂತರ ಚಂದ್ರಶೇಖರ ಪೂಜಾರಿ ಅವರನ್ನು ಸ್ಥಳಿಯರು ಯಾರೂ ನೋಡಿಲ್ಲ ಎಂದು ತಿಳಿದುಬಂದಿದೆ.

ಯಾರೊಂದಿಗೂ ಬೆರೆಯದ ಏಕಾಂಗಿಯಾಗಿದ್ದ ಚಂದ್ರಶೇಖರ ಪೂಜಾರಿ ಯಾರ ಜತೆಯೂ ಮಾತನಾಡುತ್ತಿರಲಿಲ್ಲ. ಏನು ಕೊಟ್ಟರೂ ತಿನ್ನುತ್ತಿರಲಿಲ್ಲ. ಯಾವಾಗಲೂ ಮನೆಯಲ್ಲಿ ಬಾಗಿಲು ಚಿಲಕ ಹಾಕಿಯೇ ಒಳಗಡೆ ಇರುತ್ತಿದ್ದರು. ತಮ್ಮ ಕುಟುಂಬದ ಸಹೋದರ ಸಹೋದರಿಯರು ಬಂದಾಗ ಮಾತ್ರ ಬಾಗಿಲು ತೆಗೆಯುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ನಗರ ಠಾಣಾ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಸ್ಥಳದಲ್ಲಿಯೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮಹಜರು ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News