ಮಾಣಿ-ಮಣಿನಾಲ್ಕೂರು: ಮುಚ್ಚು ಹರಾಜುಕಟ್ಟೆ ಕಟ್ಟಡಗಳ ಉದ್ಘಾಟನೆ

Update: 2019-09-18 14:03 GMT

ಬಂಟ್ವಾಳ, ಸೆ. 18: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಂಟ್ವಾಳ ವತಿಯಿಂದ ತಾಲೂಕಿನ ಮಾಣಿ ಎಂಬಲ್ಲಿ 49.19 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಮಣಿನಾಲ್ಕೂರು ಎಂಬಲ್ಲಿ 17.22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮುಚ್ಚು ಹರಾಜುಕಟ್ಟೆ ಕಟ್ಟಡಗಳ ಉದ್ಘಾಟನೆ ಮತ್ತು ಗ್ರಾಮ ಪಂಚಾಯತ್‍ಗಳಿಗೆ ಹಸ್ತಾಂತರ ಕಾರ್ಯಕ್ರಮ ಬುಧವಾರ ಮಾಣಿಯಲ್ಲಿ ನಡೆಯಿತು.

ಮಣಿನಾಲ್ಕೂರಿನಲ್ಲಿ ಉದ್ಘಾಟನೆ ಕಾರ್ಯಕ್ರಮದ ಬಳಿಕ ಮಾಣಿಯಲ್ಲಿ ಹರಾಜುಕಟ್ಟೆ ಕಟ್ಟಡವನ್ನು ಉದ್ಘಾಟಿಸಿ, ಸಮಾರಂಭವನ್ನು ಮಾತನಾಡಿದ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್, ರೈತರಿಗೆ ಅನುಕೂಲ ಮಾಡಿಕೊಟ್ಟಷ್ಟು ಕೃಷಿ ಕ್ಷೇತ್ರ ಬೆಳವಣಿಯಾಗಲಿದೆ. ಹರಾಜುಕಟ್ಟೆಗಳಿಂದ ರೈತರ ಉತ್ಪನ್ನಗಳು ಗ್ರಾಹಕರಿಗೆ ಸುಲಭವಾಗಿ ತಲುಪಲು ವೇದಿಕೆಯಾಗಲಿ ಎಂದು ಶುಭ ಹಾರೈಸಿದರು. ಕೇಂದ್ರ ಸ್ಥಾನದಲ್ಲಿರುವ ಕಟ್ಟಡ ಸುಸಜ್ಜಿತವಾಗಿ ಜನರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಲಿ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ತನ್ನ ಅವಧಿಯಲ್ಲಿ ಎಪಿಎಂಸಿಗೆ ನೀಡಲಾದ ಅನುದಾನದಿಂದ ಮುಚ್ಚು ಹರಾಜುಕಟ್ಟೆಗಳ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಮಾಣಿ ಬೆಳೆಯುತ್ತಿರುವ ಪ್ರದೇಶವಾಗಿದ್ದು, ಇಲ್ಲಿ ಎಸ್ಪಿ ಕಚೇರಿ, ಸರಕಾರಿ ಆಸ್ಪತ್ರೆ ನಿರ್ಮಿಸಿದರೆ ಜನರಿಗೆ ಅನುಕೂಲವಾಗುತ್ತದೆ. ತನ್ನ ಅವಧಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಗೊಂಡಿದೆ. ಎಪಿಎಂಸಿ ಪ್ರಾಂಗಣಕ್ಕೆ ರೈತರು ಬರುವಂತಾಗಲು ಶುಚಿತ್ವ ಕಾಪಾಡುವುದೂ ಮುಖ್ಯ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾಧವ ಮಾವೆ ಮಾತನಾಡಿ, ಎಪಿಎಂಸಿ ಹರಾಜುಕಟ್ಟೆ ಕಟ್ಟಡಗಳಲ್ಲದೆ, ಮಾಣಿಗೆ ಪ್ರಾಥಮಿಕ ಆರೋಗ್ಯ ಕೇಂದ್ರವೂ ಶೀಘ್ರ ಒದಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ತಾಲೂಕಿನಲ್ಲಿ ಕೃಷಿಕರ ಬೇಡಿಕೆಯ ಹಿನ್ನಲೆಯಲ್ಲಿ ಸ್ವಂತ ಮಾರುಕಟ್ಟೆ ಪ್ರಾಂಗಣ ಹೊಂದಬೇಕು ಎಂಬ ನಿಟ್ಟಿನಲ್ಲಿ ರಾ.ಹೆ.ಯ ಮೆಲ್ಕಾರ್‍ನಲ್ಲಿ ಸುಮಾರು 7ಎಕ್ರೆ ಜಾಗವನ್ನು ಕಾಯ್ದಿರಿಸಿಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ಆನ್‍ಲೈನ್ ಟ್ರೇಡಿಂಗ್, ಅಡಮಾನ ಸಾಲ, ರೈತ ಭವನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಂಡು ತಾಲೂಕು ವ್ಯಾಪ್ತಿಯ ವರ್ತಕರು, ಸಹಕಾರಿ ಸಂಘಗಳು, ರೈತರು ಒಂದೇ ವೇದಿಕೆಯಲ್ಲಿ ಖರೀದಿ ಮಾರಾಟ ವ್ಯವಸ್ಥೆ ಮಾಡಿ ಕೃಷಿಕರಿಗೆ ಹೆಚ್ಚು ಬೆಲೆ ಸಿಗುವಂತಾಗಿ ದಕ್ಷಿಣ ಕನ್ನಡದಲ್ಲಿ ಮಾದರಿ ಮಾರುಕಟ್ಟೆ ಪ್ರಾಂಗಣ ರಚಿಸಲು ರೂಪುರೇಷೆ ಹಾಕಿಕೊಳ್ಳಲಾಗಿದೆ ಎಂದರು.

ಎಪಿಎಂಸಿ ಕೈಗೊಂಡ ಯೋಜನೆಗಳು ಮತ್ತು ಭವಿಷ್ಯದಲ್ಲಿ ಮೇಲ್ಕಾರ್‍ನಲ್ಲಿ ಯಾರ್ಡ್ ನಿರ್ಮಿಸುವ ವಿಚಾರವನ್ನು ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಪಂ ಸದಸ್ಯರಾದ ಪದ್ಮಶೇಖರ ಜೈನ್, ರವೀಂದ್ರ ಕಂಬಳಿ, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ತಾಪಂ ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಗ್ರಾಪಂ ಅಧ್ಯಕ್ಷೆ ಮಮತಾ ಎಸ್.ಶೆಟ್ಟಿ, ಎಪಿಎಂಸಿ ಸದಸ್ಯ ನೇಮಿರಾಜ ರೈ,  ಪದ್ಮರಾಜ ಬಲ್ಲಾಳ್, ಭಾರತಿ ಎಸ್. ರೈ, ದಿವಾಕರ ಪಂಬದಬೆಟ್ಟು, ಹರಿಶ್ಚಂದ್ರ ಪೂಜಾರಿ, ಬಿ.ಚಂದ್ರಶೇಖರ ರೈ, ಗೀತಾಲತಾ ಟಿ.ಶೆಟ್ಟಿ, ಜಗದೀಶ ಡಿ, ನೇಮಿರಾಜ ರೈ, ವಿಠಲ ಸಾಲ್ಯಾನ್, ಬಾಲಕೃಷ್ಣ ಆಳ್ವ, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಕೇಶವ ಗೌಡ ಹಾಜರಿದ್ದರು. ಇದೇ ವೇಳೆ ಗ್ರಾಪಂಗಳಿಗೆ ಕಟ್ಟಡ ಹಸ್ತಾಂತರ ಕಾರ್ಯಕ್ರಮ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News