ಪಚ್ಚನಾಡಿ: ಸೆ.19ರಂದು ಮಂದಾರಕ್ಕೆ ವಿಶೇಷ ಅಧ್ಯಯನ ತಂಡ

Update: 2019-09-18 14:35 GMT

ಮಹಾನಗರ, ಸೆ. 18: ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಿಂದ ತ್ಯಾಜ್ಯದ ರಾಶಿಯು ಜರಿದು ಮಂದಾರ ಪ್ರದೇಶಕ್ಕೆ ವ್ಯಾಪಿಸಿದ ಹಿನ್ನೆಲೆಯಲ್ಲಿ ಆಗಿರುವ ಅನಾಹುತಗಳ ಬಗ್ಗೆ ಸರಕಾರಕ್ಕೆ ವರದಿ ನೀಡುವ ನೆಲೆಯಲ್ಲಿ ರಾಜ್ಯದ ವಿಶೇಷ ಅಧ್ಯಯನ ತಂಡ ಸೆ.19ರಂದು ಮಂದಾರ ಪ್ರದೇಶಕ್ಕೆ ಆಗಮಿಸಲಿದೆ.

ಮಂದಾರದಲ್ಲಿ ತ್ಯಾಜ್ಯರಾಶಿ ತುಂಬಿಕೊಂಡಿರುವ ಜಾಗವನ್ನು ಅಧ್ಯಯನ ನಡೆಸಲು ಪರಿಣತರ ತಂಡವನ್ನು ರಾಜ್ಯ ಸರಕಾರ ನೇಮಿಸಿದೆ. ವಿವಿಧ ಕ್ಷೇತ್ರದ ತಜ್ಞರಾಗಿರುವ ಚೆನ್ನೈಯ ಎಸ್.ಪಟ್ಟಾಭಿರಾಮನ್, ಮೈಸೂರಿನ ಡಾ.ಪಿ.ಎಂ.ಕುಲಕರ್ಣಿ, ಬೆಂಗಳೂರಿನ ರಮೇಶ್, ತಮಿಳುನಾಡಿನ ನಾಗೇಶ್ ಪ್ರಭು ತಂಡದಲ್ಲಿದ್ದಾರೆ.

ಮಂದಾರದಲ್ಲಿ ಸಂಗ್ರಹವಾಗಿರುವ ತ್ಯಾಜ್ಯದ ಪ್ರಮಾಣದ ಲೆಕ್ಕಾಚಾರ, ಪರಿಹಾರ ಉಪಾಯಗಳ ಬಗ್ಗೆ ವರದಿ, ಮುಂದೆ ಇಂತಹ ಘಟನೆ ಆಗದಂತೆ ಎಚ್ಚರಿಕೆ ಹಾಗೂ ಸದ್ಯ ಪರಿಸರದ ಮೇಲೆ ಬೀಳುವ ಪರಿಣಾಮ ಹಾಗೂ ಪರಿಹಾರವನ್ನು ಅಧ್ಯಯನ ತಂಡವು ಸ್ಥಳಕ್ಕೆ ಭೇಟಿ ನೀಡಿದ 15 ದಿನದ ಒಳಗೆ ಸರಕಾರಕ್ಕೆ ನೀಡಲಿದೆ ಎಂದು ಮನಪಾ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ತಿಳಿಸಿದ್ದಾರೆ.

ದಿನಬಳಕೆ ವಸ್ತುಗಳ ಕೊಡುಗೆ: ಮಂದಾರದ ತ್ಯಾಜ್ಯರಾಶಿಯಿಂದ ನಿರ್ವಸಿತರಾದ ನಿವಾಸಿಗಳು ಸದ್ಯ ಕುಲಶೇಖರದ ಬೈತುರ್ಲಿಯಲ್ಲಿ ಆಶ್ರಯ ಪಡೆದಿದ್ದು, ಅವರಿಗೆ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ವತಿಯಿಂದ ಬುಧವಾರ ದಿನಬಳಕೆ ವಸ್ತುಗಳನ್ನು ನೀಡಲಾಯಿತು.

27 ಕುಟುಂಬಗಳಿಗೆ ಪ್ರತ್ಯೇಕವಾಗಿ ಕುಕ್ಕರ್, ಬಟ್ಟಲು ಸೇರಿದಂತೆ ಅಡುಗೆ ಕಿಟ್ ಹಾಗೂ ಅಕ್ಕಿ, ಬೇಳೆ, ಟೀ ಪೌಡರ್ ಸೇರಿದಂತೆ ದಿನಬಳಕೆ ವಸ್ತುಗಳನ್ನು ನೀಡಲಾಯಿತು.

ರೆಡ್‌ಕ್ರಾಸ್ ಪ್ರಮುಖರಾದ ಪ್ರಭಾಕರ ಶರ್ಮ, ಶಾಂತಾರಾಮ ಶೆಟ್ಟಿ, ರವೀಂದ್ರನಾಥ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಮಂಗಳೂರು ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಜತೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News