ಕಲ್ಲಾಪು ಪಟ್ಲ: ಹದಗೆಟ್ಟ ರಸ್ತೆ ದುರಸ್ತಿಯ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳ ನಡುವೆ ಮಾರಾಮಾರಿ

Update: 2019-09-18 15:01 GMT

ಉಳ್ಳಾಲ, ಸೆ.18: ಕಲ್ಲಾಪು ಪಟ್ಲ ಹದಗೆಟ್ಟ ರಸ್ತೆ ದುರಸ್ತಿಯ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳ ನಡುವೆ ಕಲ್ಲಾಪು ಪಟ್ಲದಲ್ಲಿ ಮಾರಾಮಾರಿ ನಡೆದ ಘಟನೆ ವರದಿಯಾಗಿದೆ. ಕಲ್ಲಾಪು ಪಟ್ಲ ರಸ್ತೆಯಲ್ಲಿ ಮರಳು ಲಾರಿ ಸಂಚಾರದಿಂದ ರಸ್ತೆ ಹದಗೆಟ್ಟು ಹೋಗಿತ್ತು. ಇದನ್ನು ನಾಗರಿಕರು ಸೇರಿ ಮಣ್ಣು ಹಾಕಿ ದುರಸ್ತಿ ಮಾಡಿದ್ದರು. ಇತ್ತೀಚೆಗೆ ಸುರಿದ ಮಳೆಗೆ ರಸ್ತೆಯಲ್ಲಿ ಮಣ್ಣು ತುಂಬಿ ಸಂಚಾರಕ್ಕೆ ಅಯೋಗ್ಯವಾಗಿರುವುದನ್ನು ಕಂಡು ನಾಗರಿಕರು ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಧರಣಿ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ.

ಈ ಸಂದರ್ಭ ನಗರಸಭೆಯ ಕೌನ್ಸಿಲರ್‌ಗಳಾದ ದಿನಕರ್ ಉಳ್ಳಾಲ್, ಮುಶ್ತಾಕ್ ಹಾಗೂ ಬಿಜೆಪಿಯ ಕೆಲವು ಮುಖಂಡರು ಕಲ್ಲಾಪು ಪಟ್ಲಕ್ಕೆ ಬಂದು ರಸ್ತೆ ಪರಿಶೀಲಿಸಿ ಹದಗೆಟ್ಟ ರಸ್ತೆಯ ಬಗ್ಗೆ ಪ್ರಶ್ನಿಸಿ ಹೋರಾಟಕ್ಕಿಳಿದರು. ಮರಳು ಲಾರಿ ಈ ರಸ್ತೆಯಾಗಿ ಹೋಗಬಾರದು ಎಂದು ಪಟ್ಟು ಹಿಡಿದರು. ಈ ವೇಳೆ ತಂಡವೊಂದು ಘಟನಾ ಸ್ಥಳಕ್ಕೆ ಬಂದು ಕೌನ್ಸಿಲರ್‌ಗಳು ಹಾಗೂ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಹಲ್ಲೆಗೂ ಮುಂದಾಗಿತ್ತು ಎಂದು ತಿಳಿದುಬಂದಿದೆ.

ರಸ್ತೆ ದುರಸ್ತಿಯ ಬಗ್ಗೆ ನೋಡಲು ನಾವು ತೆರಳಿದ ವಿಚಾರಕ್ಕೆ ಸಂಬಂಧಿಸಿ ಕ್ಷೇತ್ರಕ್ಕೆ ಸಂಬಂಧಪಡದ ಕೌನ್ಸಿಲರ್‌ಗಳು ಇಲ್ಲಿಗೆ ಯಾಕೆ ಬರಬೇಕು ಎಂದು ಪ್ರಶ್ನಿಸಿ ಕೆಲವರು ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ದುರಸ್ತಿಯಾಗದಿರುವ ರಸ್ತೆ ಪರಿಶೀಲನೆಯನ್ನು ಬೇರೆ ವಾರ್ಡ್‌ನ ಕೌನ್ಸಿಲರ್ ಮಾಡಬಾರದು ಎನ್ನುವುದು ಎಷ್ಟು ಸರಿ? ಮರಳು ಲಾರಿ ಸಂಚಾರದಿಂದ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಮರಳು ಲಾರಿ ಸಂಚಾರಕ್ಕೆ ತಡೆಯೊಡ್ಡಬೇಕು.
-ದಿನಕರ ಉಳ್ಳಾಲ, ಕೌನ್ಸಿಲರ್, ಉಳ್ಳಾಲ ನಗರ ಸಭೆ

ಕಲ್ಲಾಪು ಪಟ್ಲ ರಸ್ತೆ ದುರಸ್ತಿಗೆ ಸಂಬಂಧಿಸಿ ನಾವು ಜೊತೆಯಾಗಿ ಹೋರಾಟ ಮಾಡಿ ನಗರಸಭೆಯ ಗಮನ ಸೆಳೆದಿದ್ದೇವೆ. ಇದೇ ವಿಚಾರಕ್ಕೆ ಸಂಬಂಧಿಸಿ ಕಲ್ಲಾಪುವಿನ ಕೆಲವರು ನಮ್ಮ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದೇವೆ. ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿರುವುದಕ್ಕಾಗಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ನಮ್ಮನ್ನು ಕೆಲಸ ಮಾಡದಂತೆ ಕೆಲವು ಕಾಂಗ್ರೆಸಿಗರು ಅಡ್ಡಿಪಡಿಸುತ್ತಿದ್ದಾರೆ.

-ಮುಶ್ತಾಕ್ ಅಹ್ಮದ್, ಕೌನ್ಸಿಲರ್ ಉಳ್ಳಾಲ ನಗರ ಸಭೆ


ಕೌನ್ಸಿಲರೊಬ್ಬರು ನೀಡಿದ ಮಾಹಿತಿ ಮೇರೆಗೆ ಕಲ್ಲಾಪು ಪಟ್ಲ ರಸ್ತೆಗೆ ಭೇಟಿ ನೀಡಿ ರಸ್ತೆ ಪರಿಶೀಲನೆ ಮಾಡಲಾಗಿದೆ. ಕೆಲವರು ರಸ್ತೆಗೆ ಮಣ್ಣು ಹಾಕಿ ದುರಸ್ತಿ ಮಾಡಿದ್ದರು. ಅದೀಗ ಮಳೆಗೆ ಎಲ್ಲೆಡೆ ಹರಡಿ ರಸ್ತೆ ಹದಗೆಟ್ಟಿದೆ. ಮರಳು ಲಾರಿ ಸಂಚಾರ ಮಾಡಿದ ಕಾರಣ ರಸ್ತೆ ಹಾಳಾಗಿದೆ. ಈ ರಸ್ತೆಯನ್ನು ಶೀಘ್ರ ದುರಸ್ತಿ ಮಾಡಲಾಗುವುದು.
-ವಾಣಿ, ಪೌರಾಯುಕ್ತರು


ಕಲ್ಲಾಪು ಪಟ್ಲದ ರಸ್ತೆ ಹಾಳಾಗಿದ್ದು, ಅದನ್ನು ಶಾಸಕ ಖಾದರ್ ನೇತೃತ್ವದಲ್ಲಿ ದುರಸ್ತಿ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಲು ಬೇರೆ ಯಾರು ಕೂಡ ಬರಬೇಕಿಲ್ಲ. ಈ ಬಗ್ಗೆ ರಸ್ತೆ ಕೆಲಸ ಮಾಡಿದವರು ಕೌನ್ಸಿಲರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
-ಉಸ್ಮಾನ್ ಕಲ್ಲಾಪು, ಮಾಜಿ ಕೌನ್ಸಿಲರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News