ನಕ್ಸಲೀಯರ ಟೆಂಟ್‌ಗೆ ಹೋಲಿಕೆಯಾಗುತ್ತಿಲ್ಲ: ಎಸ್ಪಿ ನಿಶಾ ಜೇಮ್ಸ್

Update: 2019-09-18 15:17 GMT

ಉಡುಪಿ, ಸೆ.18: ಕೊಲ್ಲೂರು ಠಾಣಾ ವ್ಯಾಪ್ತಿಯ ದಳಿ ಮಾದಿಬರೆ ಮೀಸಲು ಅರಣ್ಯ ಪ್ರದೇಶದಲ್ಲಿ ಸೆ.16ರಂದು ಬೆಳಗ್ಗೆ ಕಂಡುಬಂದ ಟಾರ್ಪಾಲು ಟೆಂಟಿನ ರಚನೆ, ಗಾತ್ರ ಹಾಗೂ ಈ ಹಿಂದಿನ ಪ್ರಕರಣಗಳನ್ನು ಪರಿಶೀಲಿಸಿದಾಗ ನಕ್ಸಲೀಯರ ಟೆಂಟ್‌ಗೆ ಹೋಲಿಕೆಯಾಗದೆ ಇದ್ದು, ಇಲ್ಲಿ ದೊರೆತ ವಸ್ತುಗಳು ನಕ್ಸಲರು ಸಾಮಾನ್ಯವಾಗಿ ಬಳಸುವ ವಸ್ತುಗಳಲ್ಲ ಎಂಬುದು ಕಂಡುಬಂದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ 2008ರ ನಂತರ ನಕ್ಸಲ್ ಸಂಬಂಧಿ ಯಾವುದೇ ಚಟುವಟಿಕೆಗಳು ಕಂಡು ಬಂದಿಲ್ಲ. ಆದರೂ ಈ ಘಟನೆಯನ್ನು ಗಣನೆಗೆ ತೆಗೆದುಕೊಂಡು ಈ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಹೆಬ್ರಿ ಎಎನ್‌ಎಫ್ ಕ್ಯಾಂಪಿನ ಡಿವೈಎಸ್‌ಪಿ ಗಣೇಶ್ ಎಂ. ಹೆಗ್ಡೆ ನೇತೃತ್ವದ ತಂಡದೊಂದಿಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳೊಂದಿಗೆ ಸೆ.17ರಂದು ಮುಂಜಾನೆ ಟೆಂಟ್ ಇರುವ ಸ್ಥಳದ ಪರಿಶೀಲನೆ ಹಾಗೂ ಅದಕ್ಕೆ ಹೊಂದಿಕೊಂಡ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದರು.

ಇದು ತಾತ್ಕಾಲಿಕವಾಗಿ ನಿರ್ಮಿಸಿರುವ ಟೆಂಟ್ ಆಗಿದ್ದು, ಒಳಗಡೆ ಅಡುಗೆ ಸಾಮಾಗ್ರಿಗಳು, ಸಣ್ಣ ಕುಂಕುಮದ ಕರಡಿಗೆ, ವಿಭೂತಿ ಇರುವ ಸಣ್ಣ ಪ್ಲಾಸಿಕ್ ಕರಡಿಗೆ, ಬಿಳಿ ಬಣ್ಣದ ರೇಷ್ಮೆ ಪಂಚೆ ಮತ್ತು ಬಿಳಿ ಬಣ್ಣದ ಟೆರಿಕೋಟ್ ಜುಬ್ಬಾ ಪತ್ತೆಯಾಗಿದೆ. ಈ ಟೆಂಟ್ ಹಾಕಿದ ಸ್ಥಳವು ಜನವಸತಿ ಪ್ರದೇಶಕ್ಕೆ ತೀರಾ ಸಮೀಪದಲ್ಲಿದ್ದು, ಜನರು ಸೊಪ್ಪು, ಉರುವಲು ಕಟ್ಟಿಗೆ ಸಂಗ್ರಹಿಸಲು ಮತ್ತು ದನ ಮೇಯಲು ಓಡಾಡುವ ಅರಣ್ಯ ಪ್ರದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸ್ಥಳವು ಧ್ಯಾನಕ್ಕೆ ಪ್ರಶಸ್ತ ಸ್ಥಳವಾಗಿದ್ದರಿಂದ ಕೇರಳ ಹಾಗೂ ಬೇರೆ ರಾಜ್ಯ ದಿಂದ ಬರುವ ಆಧ್ಯಾತ್ಮಿಕ ಒಲವುಳ್ಳ ಯಾತ್ರಾರ್ಥಿಗಳು ಈ ಅರಣ್ಯದಲ್ಲಿ ತಿರುಗಾಡಿಕೊಂಡು ಧ್ಯಾನಕ್ಕಾಗಿ ಬಂದು ಹೋಗುವುದು ತಿಳಿದು ಬಂದಿದೆ. ಆದುದರಿಂದ ಇಲ್ಲಿಗೆ ಆಧ್ಯಾತ್ಮಿಕ ಒಲವು ಇರುವ ವ್ಯಕ್ತಿಗಳು ಬಂದು ಹೋಗಿರುವ ಸಾಧ್ಯತೆ ಇದೆ ಎಂದು ಎಸ್ಪಿ ನಿಶಾ ಜೇಮ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News