ತ್ರಿವಳಿ ತಲಾಕ್ ಕಾನೂನನ್ನು ಎಲ್‌ಎಲ್‌ಬಿ, ಎಲ್‌ಎಲ್‌ಎಂ ಪಠ್ಯಕ್ರಮದಲ್ಲಿ ಸೇರಿಸಿದ ರೋಹಿಲ್ಖಂಡ್ ವಿಶ್ವವಿದ್ಯಾನಿಲಯ

Update: 2019-09-18 16:07 GMT

ಬರೇಲಿ (ಉತ್ತರಪ್ರದೇಶ), ಸೆ. 18: ಇಲ್ಲಿನ ಜ್ಯೋತಿಬಾ ಪುಲೆ ರೋಹಿಲ್ಖಂಡ್ ವಿಶ್ವವಿದ್ಯಾನಿಲಯ ತನ್ನ ಎಲ್‌ಎಲ್‌ಬಿ ಹಾಗೂ ಎಲ್‌ಎಲ್‌ಎಂ ಕೋರ್ಸ್‌ನ ಪಠ್ಯಕ್ರಮದಲ್ಲಿ ನೂತನ ತ್ರಿವಳಿ ತಲಾಕ್ ಕಾನೂನನ್ನು ಸೇರಿಸಿದೆ. ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಅಧ್ಯಯನ ಮಂಡಳಿ ಪಠ್ಯ ಕ್ರಮವನ್ನು ಪರಿಷ್ಕರಿಸಿದೆ. ಅಲ್ಲದೆ, ಇತ್ತೀಚೆಗೆ ಜಾರಿಗೆ ತರಲಾದ ತ್ರಿವಳಿ ತಲಾಕ್ ಕಾನೂನನ್ನು ಪಠ್ಯಕ್ರಮದಲ್ಲಿ ಸೇರಿಸಿದೆ ಎಂದು ವಿಶ್ವ ವಿದ್ಯಾನಿಲಯದ ಕಾನೂನು ವಿಭಾಗದ ಮುಖ್ಯಸ್ಥ ಅಮಿತ್ ಸಿಂಗ್ ತಿಳಿಸಿದ್ದಾರೆ.

ಇದರೊಂದಿಗೆ ನೂತನ ತ್ರಿವಳಿ ತಲಾಕ್ ಕಾನೂನನ್ನು ಪಠ್ಯಕ್ರಮದಲ್ಲಿ ಅಳವಡಿಸಿದ ಮೊದಲ ವಿಶ್ವವಿದ್ಯಾನಿಲಯವಾಗಿ ರೋಹಿಲ್ಖಂಡ ವಿಶ್ವವಿದ್ಯಾನಿಲಯ ಹೊರ ಹೊಮ್ಮಲಿದೆ. ತ್ರಿವಳಿ ತಲಾಕ್ ಕುರಿತು ಅಸ್ತಿತ್ವದಲ್ಲಿದ್ದ ಕಾನೂನನ್ನು ಕೈಬಿಡುವಂತೆ ಹಾಗೂ ಹೊಸ ಕಾನೂನನ್ನು ಪಠ್ಯಕ್ರಮದಲ್ಲಿ ಸೇರಿಸುವಂತೆ ಒತ್ತಡ ಬಂದಿತ್ತು ಎಂದು ಸಿಂಗ್ ಹೇಳಿದ್ದಾರೆ. ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ 2019ರ ಬಗ್ಗೆ ಮೂರನೇ ವರ್ಷದ ಎಲ್‌ಎಲ್‌ಬಿಯ ಕುಟುಂಬ ಕಾನೂನು ಪಠ್ಯದಲ್ಲಿ ವಿವರಿಸಲಾಗುವುದು ಎಂದು ಅವರು ತಿಳಿಸಿದರು. ಇದಲ್ಲದೆ, ವಿದ್ಯಾರ್ಥಿಯೊಬ್ಬರು ತ್ರಿವಳಿ ತಲಾಕ್ ಕುರಿತು ಪಿಎಚ್‌ಡಿ ಪದವಿ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು. ತ್ರಿವಳಿ ತಲಾಕ್ ಮಸೂದೆ ಎಂದು ಜನಪ್ರಿಯವಾಗಿರುವ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆ 2019 ಅನ್ನು ಸಂಸತ್ತಿನಲ್ಲಿ ಕಳೆದ ತಿಂಗಳು ಅಂಗೀಕರಿಸಲಾಗಿತ್ತು. ಇತ್ತೀಚೆಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ತ್ರಿವಳಿ ತಲಾಕ್ ಕುರಿತು ಚರ್ಚೆ ನಡೆಸುವಂತೆ ಕರೆ ನೀಡಿದ್ದರು. ಅಲ್ಲದೆ, ಮಹಿಳಾ ಸಬಲೀಕರಣದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಅಧ್ಯಾಪಕರಿಗೆ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News