ದಲಿತ ಯುವಕ ಸ್ವತಃ ಮೈಗೆ ಬೆಂಕಿ ಹಚ್ಚಿಕೊಂಡಿದ್ದ: ಉ.ಪ್ರದೇಶ ಪೊಲೀಸರ ಹೇಳಿಕೆ

Update: 2019-09-18 16:37 GMT

ಲಕ್ನೋ,ಸೆ.18: ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಬೀಗ ಹಾಕಿದ್ದ ಕೋಣೆಯೊಂದರಲ್ಲಿ ಬೆಂಕಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕ ಹೊರಗೆ ಸೇರಿದ್ದ ಗುಂಪಿನಿಂದ ಪಾರಾಗಲು ಸ್ವತಃ ತನ್ನ ಮೈಗೆ ಬೆಂಕಿ ಹಚ್ಚಿಕೊಂಡಿದ್ದ ಎಂದು ಸ್ಥಳೀಯ ಪೊಲೀಸರು ಬುಧವಾರ ಹೇಳಿದ್ದಾರೆ.

ಪೊಲೀಸರ ಈ ಹೇಳಿಕೆಯು ಯುವಕನ ಮರಣ ಹೇಳಿಕೆ ಮತ್ತು ಇದು ಮರ್ಯಾದಾ ಹತ್ಯೆಯಾಗಿದೆ ಎಂಬ ಕುಟುಂಬದ ಹೇಳಿಕೆಗಳಿಗಿಂತ ಭಿನ್ನವಾಗಿದೆ.

ತಂಬಾಕು ಖರೀದಿಸಲು ತಾನು ಪ್ರೀತಿಸುತ್ತಿದ್ದ ಬಾಲಕಿಯ ಕುಟುಂಬಕ್ಕೆ ಸೇರಿದ ಅಂಗಡಿಗೆ ತೆರಳಿದ್ದಾಗ ತನ್ನನ್ನು ಅಪಹರಿಸಲಾಗಿತ್ತು ಮತ್ತು ತನ್ನ ಮೈಗೆ ಬೆಂಕಿ ಹಚ್ಚಲಾಗಿತ್ತು ಎಂದು ದಲಿತ ಯುವಕ ಮೋನು (20) ಸಾಯುವ ಮುನ್ನ ಪೊಲೀಸರಿಗೆ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿದ್ದ. ಮೋನುವಿನ ತಾಯಿ ಈ ಸುದ್ದಿಯನ್ನು ಕೇಳಿ ಆಘಾತದಿಂದ ಮೃತಪಟ್ಟಿದ್ದಳು.

ಹಿರಿಯ ಪೊಲೀಸ್ ಅಧಿಕಾರಿ ಅಲೋಕ ಪ್ರಿಯದರ್ಶಿ ಅವರು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಮತ್ತು ಮೇಲ್ನೋಟದ ಸಾಕ್ಷಾಧಾರಗಳನ್ನು ಉಲ್ಲೇಖಿಸಿ ಮೋನು ಸ್ವತಃ ಮೈಗೆ ಬೆಂಕಿ ಹಚ್ಚಿಕೊಂಡಿದ್ದ ಎಂದಿದ್ದಾರೆ.

ಮೋನು ಶನಿವಾರ ರಾತ್ರಿ ತನ್ನ ಮನೆಯಿಂದ 200 ಮೀ.ಅಂತರದಲ್ಲಿ ವಾಸವಿರುವ,ಮೇಲ್ಜಾತಿಗೆ ಸೇರಿದ ತನ್ನ ಹದಿಹರೆಯದ ಗೆಳತಿಯನ್ನು ಭೇಟಿಯಾಗಲು ತೆರಳಿದ್ದ. ಹುಡುಗಿಯ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಇಬ್ಬರನ್ನೂ ಹಿಡಿದಿದ್ದು,ಮೋನುವನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು. ಮಾಹಿತಿ ಪಡೆದ ಜನರು ಕೋಣೆಯ ಹೊರಗೆ ಗುಂಪುಗೂಡಿದ್ದರು ಎಂದು ಅವರು ಹೇಳಿದರು. ತೀವ್ರ ಸುಟ್ಟ ಗಾಯಗಳಾಗಿದ್ದ ಮೋನು ರವಿವಾರ ಕೊನೆಯುಸಿರೆಳೆದಿದ್ದ.

ಮೋನುವಿನ ಮರಣ ಹೇಳಿಕೆ ಮತ್ತು ಆತನನನ್ನು ಮಂಚವೊಂದಕ್ಕೆ ಕಟ್ಟಿ ಹಾಕಿ ಮೈಗೆ ಬೆಂಕಿ ಹಚ್ಚಲಾಗಿತ್ತು ಎಂಬ ಕುಟುಂಬದ ದೂರಿಗಿಂತ ಪೊಲೀಸರ ಹೇಳಿಕೆಯು ಭಿನ್ನವಾಗಿದೆ. ಮೋನುವನ್ನು ಕಟ್ಟಿಹಾಕಿ ಬೆಂಕಿ ಹಚ್ಚಲಾಗಿತ್ತೆನ್ನಲಾದ ಮಂಚದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಆಸ್ತಿ ವಿವಾದ ಗುಂಪಿನ ದಾಳಿಗೆ ಕಾರಣ ಎಂದೂ ಮೋನುವಿನ ಕುಟುಂಬವು ಹೇಳಿದೆ.

ಕೊಲೆ ಆರೋಪ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದರೂ,ಈವರೆಗೆ ಯಾರನ್ನೂ ಬಂಧಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News