ಕರ್ನಾಟಕ ವಿವಿ ರ್ಯಾಂಕಿಂಗ್: ಮಾಹೆಗೆ ಅಗ್ರ ರ್ಯಾಂಕ್

Update: 2019-09-18 17:48 GMT

ಉಡುಪಿ, ಸೆ.18: ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ರೇಟಿಂಗ್‌ನಲ್ಲಿ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಅಗ್ರಸ್ಥಾನ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಮಾಹೆ ಎರಡನೇ ಬಾರಿಗೆ ಅಗ್ರ ಪ್ರಶಸ್ತಿಯನ್ನು ಪಡೆಯಿತು.

ಕರ್ನಾಟಕ ರಾಜ್ಯ ವಿವಿ ರೇಟಿಂಗ್ ‘ಪ್ರೇಮ್‌ವರ್ಕ್ 2018-19’ರಲ್ಲಿ ಅಗ್ರಸ್ಥಾನ ಪಡೆದ ಮಾಹೆ ಪರವಾಗಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ , ಗುಣಮಟ್ಟದ ನಿರ್ದೇಶಕ ಡಾ.ಕ್ರಿಸ್ಟೋಫರ್ ಸುಧಾಕರ್ ಅವರು, ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಎಂಸಿ ಮಂಗಳೂರಿನ ಹಳೆವಿದ್ಯಾರ್ಥಿ ಡಾ.ಸಿ. ಎನ್. ಅಶ್ವಥನಾರಾಯಣರಿಂದ ಪ್ರಶಸ್ತಿ ಸ್ವೀಕರಿಸಿದರು.

ಕರ್ನಾಟಕದ ವಿವಿಗಳ ರೇಟಿಂಗ್‌ನ್ನು ನಿನ್ನೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಕೌನ್ಸಿಲ್‌ನ ಸಹಯೋಗದೊಂದಿಗೆ ಉನ್ನತ ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿತ್ತು. ಮಾಹೆ ಗರಿಷ್ಠ 1000 ಅಂಕಗಳಲ್ಲಿ 841 ಅಂಕಗಳನ್ನು ಪಡೆದು ಅಗ್ರಸ್ಥಾನಿಯಾಗಿತ್ತು. ರಾಜ್ಯದಲ್ಲಿರುವ ಎಲ್ಲಾ ಸ್ಟೇಟ್, ಖಾಸಗಿ ಹಾಗೂ ಡೀಮ್ಡ್ ವಿವಿಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು.

 ಸಮೀಕ್ಷೆಯನ್ನು ಭಾರತೀಯ ಶೈಕ್ಷಣಿಕ ರ್ಯಾಂಕಿಂಗ್ ಮತ್ತು ಎಕ್ಸಲೆನ್ಸ್ ಕೇಂದ್ರ ‘ಐಕೇರ್ ರೇಟಿಂಗ್ಸ್’ ನಡೆಸಿತ್ತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಬಲ್ಲಾಳ್, ‘ರಾಜ್ಯದ ಎಲ್ಲಾ ವಿವಿಗಳಲ್ಲಿ ಮಾಹೆ ಅಗ್ರಸ್ಥಾನ ಪಡೆದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾವು ನಮ್ಮ ನಿರೀಕ್ಷೆ ಮಟ್ಟದ ಸಾಧನೆ ಮಾಡಿದ್ದೇನೆ. ಇದು ಖಂಡಿತಾ ದೊಡ್ಡ ಗೌರವವಾಗಿದೆ. ನಮ್ಮ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಕಠಿಣ ದುಡಿಮೆಯಿಂದ ಈ ಸ್ಥಾನವನ್ನು ನಾವು ಮುಂದೆಯೂ ಉಳಿಸಿಕೊಳ್ಳುತ್ತೇವೆ ಎಂಬ ವಿಶ್ವಾಸ ನನಗಿದೆ.’ ಎಂದರು.

ಎನ್‌ಐಆರ್‌ಎಫ್ ಮಾದರಿಯಲ್ಲೇ ರಾಜ್ಯ ವಿವಿ ರ್ಯಾಂಕಿಂಗ್‌ನ್ನು ನಡೆಸಲಾಗಿದೆ. ಎನ್‌ಐಆರ್‌ಎಫ್ ರಾಷ್ಟ್ರೀಯ ರ್ಯಾಂಕಿಂಗ್‌ನಲ್ಲಿ ಮಾಹೆ ದೇಶದ ಅಗ್ರಗಣ್ಯ 10 ವಿವಿಗಳಲ್ಲಿ 9ನೇ ಸ್ಥಾನ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News