ಇಪಿಎಫ್‌ಒ,ಇಎಸ್‌ಐಸಿಗಳಿಗೆ ಕಾರ್ಪೊರೇಟ್ ಸ್ವರೂಪ ನೀಡಲು ಮುಂದಾಗಿರುವ ಸರಕಾರ

Update: 2019-09-18 18:04 GMT

 ಹೊಸದಿಲ್ಲಿ,ಸೆ.18: ಸಾಮಾಜಿಕ ಭದ್ರತಾ ಸಂಸ್ಥೆಗಳಿಗೆ ಕಾರ್ಪೊರೇಟ್ ಸ್ವರೂಪ ನೀಡುವ ಪ್ರಯತ್ನವಾಗಿ ಸರಕಾರವು ಕರಡು ಸಂಹಿತೆಯೊಂದನ್ನು ಬಿಡುಗಡೆಗೊಳಿಸಿದೆ. ನೌಕರರ ಭವಿಷ್ಯನಿಧಿ ಸಂಸ್ಥೆ (ಇಪಿಎಫ್‌ಒ) ಮತ್ತು ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ)ಗಳ ರಚನೆಯಲ್ಲಿ ಬದಲಾವಣೆಗಳನ್ನು ತರಲು ಬಯಸಿರುವ ಸಂಹಿತೆಯು ಮೊದಲ ಬಾರಿಗೆ ಇವೆರಡೂ ಸಂಸ್ಥೆಗಳಿಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ)ಗಳನ್ನು ನೇಮಕಗೊಳಿಸಲು ಉದ್ದೇಶಿಸಿದೆ.

 ಹಾಲಿ ಇಪಿಎಫ್‌ಒ ಮತ್ತು ಇಎಸ್‌ಐಸಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಡಿ ಅನುಕ್ರಮವಾಗಿ ಟ್ರಸ್ಟಿಗಳು ಮತ್ತು ಆಡಳಿತ ಮಂಡಳಿಯಿಂದ ಹೆಚ್ಚಿನಂಶ ಸ್ವಾಯತ್ತ ಸಂಸ್ಥೆಗಳಾಗಿ ನಿರ್ವಹಿಸಲ್ಪಡುತ್ತಿವೆ. ಸಂಸತ್ತಿನ ಕಾಯ್ದೆಯೊಂದರ ಮೂಲಕ ಇವೆರಡೂ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಿವೆ.

 ಕಾರ್ಮಿಕ ಸಚಿವರು ಇಪಿಎಫ್‌ಒ ಕೇಂದ್ರೀಯ ವಿಶ್ವಸ್ತ ಮಂಡಳಿ ಮತ್ತು ಇಎಸ್‌ಐಸಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಳ್ಳುವುದು ಸಂಪ್ರದಾಯವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಸಹಾಯಕ ಕಾರ್ಮಿಕ ಸಚಿವರ ಅನುಪಸ್ಥಿತಿಯಲ್ಲಿ ಕಾರ್ಮಿಕ ಕಾರ್ಯದರ್ಶಿಗಳು ಉಭಯ ಸಂಸ್ಥೆಗಳ ಉಪಾಧ್ಯಕ್ಷರಾಗಿರುತ್ತಾರೆ.

ಕೇಂದ್ರ ಸರಕಾರವು ಈ ಎರಡೂ ಸಂಸ್ಥೆಗಳಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ನೇಮಕಗೊಳಿಸಲು ಕರಡು ಸಂಹಿತೆಯು ಅವಕಾಶವನ್ನು ಒದಗಿಸುತ್ತದೆ. ಹೀಗೆ ನೇಮಕಗೊಳ್ಳುವವರು ಕಾರ್ಮಿಕ ಸಚಿವರು ಮತ್ತು ಕಾರ್ಮಿಕ ಕಾರ್ಯದರ್ಶಿಗಳ ಬದಲು ಬೇರೆಯೇ ವ್ಯಕ್ತಿಗಳಾಗಿರಬಹುದು.

ಈಗಿರುವಂತೆ ಕೇಂದ್ರ ಭವಿಷ್ಯನಿಧಿ ಆಯುಕ್ತರು ಮತ್ತು ಮಹಾ ನಿರ್ದೇಶಕರು ನಿರ್ವಹಣಾ ಮುಖ್ಯಸ್ಥರಾಗಿ ಅನುಕ್ರಮವಾಗಿ ಇಪಿಎಫ್‌ಒ ಮತ್ತು ಇಎಸ್‌ಐಸಿಗಳನ್ನು ನಡೆಸುತ್ತಿದ್ದಾರೆ. ಕರಡು ಸಂಹಿತೆಯಲ್ಲಿನ ಪ್ರಸ್ತಾವದಂತೆ ಇನ್ನು ಮುಂದೆ ಕೇಂದ್ರ ಲೋಕಸೇವಾ ಆಯೋಗದೊಂದಿಗೆ ಸಮಾಲೋಚನೆಗಳ ಬಳಿಕ ಐಎಎಸ್ ಅಥವಾ ಇತರ ಸೇವೆಗಳ ಅಧಿಕಾರಿಗಳನ್ನು ಈ ಸಂಸ್ಥೆಗಳಿಗೆ ಸಿಇಒಗಳನ್ನಾಗಿ ನೇಮಿಸಬಹುದಾಗಿದೆ.

ಎಂಟು ಕೇಂದ್ರಿಯ ಕಾರ್ಮಿಕ ಕಾಯ್ದೆಗಳು ಸಂಹಿತೆಯಲ್ಲಿ ಅಂತರ್ಗತಗೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News