ತೇಜಸ್ ಯುದ್ಧವಿಮಾನದಲ್ಲಿ ಹಾರಾಡಿದ ಮೊದಲ ರಕ್ಷಣಾ ಸಚಿವ ರಾಜನಾಥ್ ಸಿಂಗ್

Update: 2019-09-19 13:59 GMT

ಹೊಸದಿಲ್ಲಿ, ಸೆ.19: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಈ ಮೂಲಕ ದೇಶೀಯ ನಿರ್ಮಿತ ಲಘು ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ ದೇಶದ ಪ್ರಪ್ರಥಮ ರಕ್ಷಣಾ ಸಚಿವ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ.

ರಕ್ಷಣಾ ಸಚಿವರೊಂದಿಗೆ ಏರ್‌ವೈಸ್ ಮಾರ್ಷಲ್ ಎನ್ ತಿವಾರಿ ಕೂಡಾ ಇದ್ದರು. ತಿವಾರಿ ಬೆಂಗಳೂರಿನ ನ್ಯಾಷನಲ್ ಫ್ಲೈಟ್ ಟೆಸ್ಟ್ ಸೆಂಟರ್‌ನ ಯೋಜನಾ ನಿರ್ದೇಶಕರಾಗಿದ್ದಾರೆ. ಜಿ-ಸೂಟ್ ಧರಿಸಿದ್ದ ರಾಜನಾಥ್ ಸಿಂಗ್ ಅವಳಿ ಸೀಟಿನ ತೇಜಸ್ ವಿಮಾನದಲ್ಲಿ 30 ನಿಮಿಷ ಹಾರಾಟ ನಡೆಸಿದ್ದು ಇದರಿಂದ ಭಾರತೀಯ ವಾಯುಪಡೆಯ ಪೈಲಟ್‌ಗಳ ಆತ್ಮವಿಶ್ವಾಸ ಹೆಚ್ಚಲಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಯುದ್ಧವಿಮಾನದಲ್ಲಿ ನಡೆಸಿದ ಹಾರಾಟ ಅತ್ಯಂತ ರೋಮಾಂಚಕವಾಗಿತ್ತು. ತನ್ನ ಜೀವನದಲ್ಲಿ ಕಳೆದ ಕೆಲವು ಅತ್ಯಮೂಲ್ಯ ಕ್ಷಣಗಳಲ್ಲಿ ಇದೂ ಒಂದಾಗಿದೆ. ಇಂತಹ ಅದ್ಭುತ ಲಘು ಯುದ್ಧವಿಮಾನ ತಯಾರಿಸಿ ಎಚ್‌ಎಎಲ್ ಸಂಸ್ಥೆಗೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಹಾಗೂ ಕೈಜೋಡಿಸಿದ ಎಲ್ಲಾ ಇಂಜಿನಿಯರ್‌ಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಂಗ್ ಹೇಳಿದ್ದಾರೆ.

ರಕ್ಷಣಾ ಸಚಿವರು ವಿಮಾನವೇರುವ ಮೊದಲು ವಿಮಾನದ ಪೈಲಟ್‌ಗಳು ದೇಶೀಯವಾಗಿ ನಿರ್ಮಿಸಿದ ತೇಜಸ್ ಯುದ್ಧವಿಮಾನದ ವಾಯು ತಜ್ಞತೆ, ವೈಮಾನಿಕ ಕೌಶಲ್ಯ, ನಿಯಂತ್ರಣ, ರೇಡಾರ್‌ಗಳು, ಗಾಜಿನ ಕಾಕ್‌ಪಿಟ್ ಬಗ್ಗೆ ಹಾಗೂ ವೈಮಾನಿಕ ದಾಳಿಯ ಸಂದರ್ಭ ಹೊತ್ತೊಯ್ಯುವ ಶಸತ್ಸಾಸ್ತ್ರಗಳ ಬಗ್ಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News