ಚಿತ್ರಕಲಾ ವಿದ್ಯಾರ್ಥಿಗಳ ಕಲಾ ಪ್ರದರ್ಶನ ‘ಇಂಪ್ರೆಶನ್’ ಉದ್ಘಾಟನೆ

Update: 2019-09-19 14:11 GMT

ಉಡುಪಿ, ಸೆ.19: ಉಡುಪಿ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ಚಿತ್ರಕಲಾ ವಿದ್ಯಾರ್ಥಿಗಳು ಕಪ್ಪು ಬಿಳುಪು ರೇಖಾಚಿತ್ರದ ಮೂಲಕ ರಚಿಸಿದ ವಿವಿಧ ರೀತಿಯ ಕಲಾಕೃತಿಗಳು ಇಂದಿನ ಸಮಾಜದಲ್ಲಿ ನಡೆಯುತ್ತಿರುವ ತಲ್ಲಣಗಳನ್ನು ಅನಾವರಣಗೊಳಿಸಿತು.

ಒಟ್ಟು 18 ಚಿತ್ರಕಲಾ ವಿದ್ಯಾರ್ಥಿಗಳು ಪೆನ್ ಆ್ಯಂಡ್ ಆರ್ಟ್‌ನಲ್ಲಿ 32 ಕಪ್ಪು ಬಿಳುಪಿನ ಕಲಾಕೃತಿಗಳನ್ನು ರಚಿಸಿದ್ದು, ಇವುಗಳು ಪ್ರಕೃತಿ ಹಾಗೂ ಮಾನವ ಜೀವನದ ಮೇಲೆ ಬೆಳಕು ಚೆಲ್ಲುತ್ತಿವೆ. ಪ್ರಕೃತಿ ಜೊತೆ ಬದುಕು, ನಗರದ ಒತ್ತಡದ ಜೀವನ, ನಗರೀಕರಣ, ಪ್ರಕೃತಿಯ ಮೇಲಿನ ದಾಳಿ, ಭಾರತೀಯ ವಾಸ್ತು ಶಿಲ್ಪ ಹೀಗೆ ವಿವಿಧ ರೀತಿಯ ಕಲಾಕೃತಿಗಳು ಗಮನ ಸೆಳೆದವು.

ಅಂತಿಮ ವರ್ಷದ ಕಲಾ ವಿದ್ಯಾರ್ಥಿ ಪ್ರದೀಪ್ ಕುಮಾರ್ ತನ್ನ ಕಲಾಕೃತಿ ಬಗ್ಗೆ ಪ್ರತಿಕ್ರಿಯಿಸಿ, ‘ನಾವು ಇಂದು ವಿರೂಪಗೊಂಡ ಶಿಲ್ಪಕಲೆಯ ಇತರ ಅಂಗ ಗಳನ್ನು ಹುಡುಕುತ್ತಿದ್ದೇವೆ. ಆದರೆ ಅದು ಎಲ್ಲೂ ಕಳೆದುಹೋಗಿಲ್ಲ. ಅದರ ಮೇಲೆ ಇಂದು ನಗರ ಬೆಳೆದು ನಿಂತಿದೆ ಎಂಬುದನ್ನು ಚಿತ್ರ ಬಿಂಬಿಸುತ್ತದೆ’ ಎಂದು ತಿಳಿಸಿದರು.

‘ನಾಲ್ಕು ಟೆಂಪಲ್ ಆರ್ಟ್ ಕಲಾಕೃತಿಗಳನ್ನು ರಚಿಸಿದ್ದೇನೆ. ಇದನ್ನು ಭಾರತದ ವಾಸ್ತುಶಿಲ್ಪ ಕಲೆಯಿಂದ ಸ್ಪೂರ್ತಿಪಡೆದು ರಚಿಸಲಾಗಿದೆ’ ಎಂದು ಅಂತಿಮ ವರ್ಷದ ವಿದ್ಯಾರ್ಥಿ ಬೇಲೂರು ಹಳೆಬೀಡಿನ ತೇಜರಾಜು ಸಿ.ಎಂ. ಹೇಳಿದರು. ‘ಭ್ರೂಣ ಹತ್ಯೆಯ ಹಾಗೂ ನಗರದಲ್ಲಿ ಮಕ್ಕಳು ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ದಾರಿ ತಪ್ಪುತ್ತಿರುವ ಕುರಿತು ಒಂದೇ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದು ಮೂರನೆ ವರ್ಷದ ವಿದ್ಯಾರ್ಥಿನಿ ಸಹನಾ ಆರ್.ಕೆ. ತಿಳಿಸಿದರು.

ಅದೇ ರೀತಿ ಒಂದನೆ ವರ್ಷದ ರಾಘವೇಂದ್ರ ಆಚಾರಿ ಚಿತ್ರಿಸಿರುವ ಮರಗಳ ನಾಶ ಹಾಗೂ ನಗರೀಕರಣದ ಪ್ರಭಾವ, ಮೂರನೆ ವರ್ಷದ ವಿದ್ಯಾರ್ಥಿ ಭರತ್ ಹಾವಂಜೆ ರಚಿಸಿರುವ ಸಮುದ್ರದೊಳಗಿನ ಅದ್ಭುತ ಲೋಕ ಹಾಗೂ ಹರ್ಶಲ್ ಸುವರ್ಣ ರಚಿಸಿರುವ ಅನ್ಯಗ್ರಹದ ಜೀವಿ ಕುರಿತ ಕಲಾಕೃತಿಗಳು ಆಕರ್ಷಣೀಯ ವಾಗಿದ್ದವು.

ಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಬ್ರಹ್ಮಾವರ ಹಿರಿಯ ಸರಕಾರಿ ಚಿತ್ರಕಲಾ ಶಿಕ್ಷಕ ದಿನಮಣಿ ಶಾಸ್ತ್ರಿ ಮಾತನಾಡಿ, ಕಲೆ ಮತ್ತು ಸಂಸ್ಕೃತಿಯ ಆ ಮೂಲಕ ಆ ದೇಶದ ಶ್ರೀಮಂತಿಕೆಯನ್ನು ಅಳೆಯಬಹುದಾಗಿದೆ. ಆದುದರಿಂದ ಕಲೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕತೆಯನ್ನು ಬೇರ್ಪಡಿಸಲಾಗುವುದಿಲ್ಲ. ಅವುಗಳ ಇದ್ದರೆ ಮಾತ್ರ ಬದುಕು ಉತ್ತಮವಾಗಿರಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್‌ನ ಆಡಳಿತಾಧಿಕಾರಿ ಗಾಯತ್ರಿ ಉಪಾಧ್ಯ ಶುಭ ಹಾರೈಸಿದರು. ವಿದ್ಯಾಲಯದ ಪ್ರಾಚಾರ್ಯ ರಾಜೇಂದ್ರ ತ್ರಾಸಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರದೀಪ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಲಾ ಪ್ರದರ್ಶನ ಸೆ.22ರವರೆಗೆ ಬೆಳಗ್ಗೆ 9:30ರಿಂದ ಸಂಜೆ 6ಗಂಟೆಯವರೆಗೆ ವೀಕ್ಷಣೆಗೆ ಲಭ್ಯ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News