ಪರಿಹಾರಕ್ಕಾಗಿ ಪಾದೂರು ಕಚ್ಛಾತೈಲ ಘಟಕದ ಸಂತ್ರಸ್ತರ ಆಗ್ರಹ

Update: 2019-09-19 14:14 GMT

ಉಡುಪಿ, ಸೆ.19: ಪಾದೂರು ಕಚ್ಛಾತೈಲ ಸಂಗ್ರಹಣಾ ಘಟಕದ ಮೊದಲ ಹಂತದ ಕಾಮಗಾರಿಯ ಸಂತ್ರಸ್ತರಿಗೆ ಪರಿಹಾರ ನೀಡುವ ಮೊದಲೇ ಇದೀಗ ಎರಡನೆ ಹಂತದ ಕಾಮಗಾರಿಗೆ ಯೋಜನೆ ಹಾಕಿಕೊಳ್ಳಲಾಗಿದ್ದು, ಕೂಡಲೇ ಸಂತ್ರಸ್ತರಿಗೆ ಬಾಕಿ ಇರುವ ಪರಿಹಾರವನ್ನು ನೀಡಬೇಕು ಎಂದು ಮಾಸ್ ಇಂಡಿಯಾ ಒತ್ತಾಯಿಸಿದೆ.

ಎರಡನೆ ಹಂತದಲ್ಲಿ ಪಾದೂರು, ಶಿರ್ವ, ಕಳತ್ತೂರು ಗ್ರಾಮಗಳ ಸುಮಾರು 210 ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು, ಭೂಸ್ವಾಧೀನಕ್ಕಾಗಿ ಸರ್ವೆ ನಡೆಸಲು ಐಎಸ್‌ಪಿಆರ್‌ಎಲ್ ಉಡುಪಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ ಎಂದು ಮಾಸ್ ಇಂಡಿಯಾ ಕರ್ನಾಟಕ ಅಧ್ಯಕ್ಷ ಜಿ.ಎ. ಕೋಟ್ಯಾರ್ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.

ಮೊದಲನೆ ಹಂತದ ಕಾಮಗಾರಿಯಿಂದ 120 ಮನೆಗಳು ನೆಲೆ ಕಳೆದು ಕೊಂಡಿದ್ದು, ಬಂಡೆ ಸ್ಪೋಟಗಳಿಂದ 68 ಮನೆಗಳಿಗೆ ಹಾನಿಯಾಗಿವೆ. ಅದೇ ರೀತಿ ತೋಟ, ಮರಗಳು ಕೂಡ ಕಳೆದುಕೊಳ್ಳಲಾಗಿದೆ. ಆದರೆ ಇವರಿಗೆ ಸರಕಾರ ಈವರೆಗೆ ಪರಿಹಾರ ನೀಡಿಲ್ಲ. ಸಂತ್ರಸ್ತರ ಹೆಸರಿನಲ್ಲಿ ಮಧ್ಯವರ್ತಿಗಳು ಮೋಸ ಮಾಡಿ ಹಣವನ್ನು ದೋಚುತ್ತಿದ್ದಾರೆ ಎಂದು ಅವರು ದೂರಿದರು.

ಮೊದಲನೆ ಹಂತದಲ್ಲಿ ಮನೆಮಠ ಕಳೆದುಕೊಂಡ ಬಡವರಿಗೆ ಪರಿಹಾರವನ್ನು ನೀಡಬೇಕು. ಬಂಡೆಕಲ್ಲು ಸ್ಫೋಟದಿಂದ ಮನೆಗೆ ಹಾನಿಯಾಗಿದ್ದ ಸಂತ್ರಸ್ತರಿಗೆ ಪರಿಹಾರಧನವನ್ನು ನೀಡಬೇಕು. ಸರಕಾರದಿಂದ ಬಿಡುಗಡೆಗೊಂಡ ಪರಿಹಾರ ಧನವನ್ನು ಕೆಲವು ಗಣ್ಯ ವ್ಯಕ್ತಿಗಳು ಹಾಗೂ ಮಧ್ಯವರ್ತಿಗಳು ದುರುಪಯೋಗ ಪಡಿಸಿಕೊಂಡು ಬಡ ಸಂತ್ರಸ್ತರಿಗೆ ಮೋಸ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ಒತ್ತಾಯಿಸಿದರು.

ಸ್ಥಳೀಯ ಜನರಿಗೆ ಐಎಸ್‌ಪಿಆರ್‌ಎಲ್‌ನಲ್ಲಿ ಕಡ್ಡಾಯವಾಗಿ ಉದ್ಯೋಗಾ ವಕಾಶಗಳನ್ನು ಕಲ್ಪಿಸಬೇಕು. ಎರಡನೆ ಹಂತದ ಕೆಲಸ ಆರಂಭ ಮಾಡುವ ಮೊದಲು ಭೂಮಿ ಕಳೆದುಕೊಳ್ಳುವವರಿಗೆ ಸರಕಾರದ ನಿಯಮಾನುಸಾರವಾಗಿ ಅವರ ಪರಿಹಾರದ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ಹಾಕಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಸ್ಥಳೀಯ ಗ್ರಾಮಸ್ಥರೊಂದಿಗೆ ಸೇರಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಸ್ ಇಂಡಿಯಾದ ಜಯ ಪೂಜಾರಿ, ಗೀತಾ ಸುವರ್ಣ, ಪ್ರವೀಣ್ ಕೋರ್ಡಾ, ಐರಿನ್ ಥಾವ್ರೋ, ವಿಠಲ್ ಜತ್ತನ್ನ ಉಪಸ್ಥಿತರಿದ್ದರು.

‘ಈ ಪ್ರದೇಶದಲ್ಲಿ ಸಾಕಷ್ಟು ಮಂದಿ ಐದು ಸೆಂಟ್ಸ್ ಜಾಗದಲ್ಲಿ ವಾಸ ಮಾಡಿ ಕೊಂಡಿದ್ದಾರೆ. ಸರಕಾರ ಸೆಂಟ್ಸ್‌ಗೆ 28ಸಾವಿರ ರೂ. ಪರಿಹಾರ ಮೊತ್ತವನ್ನು ಪಡೆದು ಇವರೆಲ್ಲಾ ಎಲ್ಲಿಗೆ ಹೋಗಬೇಕು. ಎರಡನೆ ಹಂತದ ವ್ಯಾಪ್ತಿಗೆ ಸುಮಾರು 500 ಮನೆಗಳು ಒಳಪಡಲಿವೆ. ಅದೇ ರೀತಿ ಸಾವಿರಾರು ಮರಗಳು, ಕೃಷಿ ಭೂಮಿಯನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ’

-ಪ್ರವೀಣ್ ಕೋರ್ಡಾ ಕಳತ್ತೂರು

‘ಇಲ್ಲಿ ಯಾವುದೇ ಮಾಹಿತಿ ನೀಡದೆ ಸ್ಪೋಟಗಳನ್ನು ನಡೆಸಿದ ಪರಿಣಾಮ ಮನೆಗಳಿಗೆ ಹಾನಿಯಾಗಿವೆ. ತೋಟ ಹಾಗೂ ಕೃಷಿಭೂಮಿಗೆ ಹಾನಿಯಾಗಿವೆ. ಮೊದಲನೆ ಹಂತದಲ್ಲಿ ಸಮೃದ್ಧವಾದ ಕೃಷಿ ಭೂಮಿ ಕಳೆದುಕೊಂಡು ತುತ್ತು ಅನ್ನಕ್ಕೂ ಬೇಡುವ ಪರಿಸ್ಥಿತಿ ನಮ್ಮದಾಗಿದೆ. ಇದರಿಂದ ನಾವು ನೋವು ಅನುಭವಿಸುತ್ತಿದ್ದೇವೆ. ನಮ್ಮ ಜನಪ್ರತಿನಿಧಿಗಳು ಈಗ ಬಾಯಿ ತೆರೆಯುತ್ತಿಲ್ಲ’
-ಐರಿನ್ ಥಾವ್ರೋ, ಸಂತ್ರಸ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News