ಪುತ್ತೂರು ಸಾಂದೀಪನಿ ಗ್ರಾಮೀಣ ಶಿಕ್ಷಣ ಸಂಸ್ಥೆಗೆ `ಐಎಸ್‍ಒ' ಪ್ರಮಾಣಪತ್ರ

Update: 2019-09-19 14:22 GMT

ಪುತ್ತೂರು: ಕಳೆದ 2001ರಿಂದ ಪುತ್ತೂರು ತಾಲೂಕಿನ ನರಿಮೊಗರುವಿನಲ್ಲಿ ಕಾರ್ಯಾಚರಿಸುತ್ತಿರುವ ಸಾಂದೀಪನಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಗುಣಮಟ್ಟ ಮತ್ತು ವ್ಯವಸ್ಥಿತ ಕಾರ್ಯನಿರ್ವಹಣೆ ಗಮನಿಸಿ ಸ್ವಿಝರ್‍ಲ್ಯಾಂಡ್ ಮೂಲದ ಇಂಟರ್‍ನ್ಯಾಶನಲ್ ಆರ್ಗನೈಸೇಶನ್ ಫಾರ್ ಸ್ಟಾಂಡರ್ಡೈಸೇಶನ್ ಸಂಸ್ಥೆಯು ಐಎಸ್‍ಒ-2015 ಪ್ರಮಾಣಪತ್ರ ನೀಡಿದೆ ಎಂದು ಸಾಂದೀಪನಿ ಶಿಕ್ಷಣ ಸಂಸ್ಥೆಯ ಸ್ಥಾಪಕ ಶಿಬರ ಜಯರಾಮ ಕೆದಿಲಾಯ ತಿಳಿಸಿದ್ದಾರೆ.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಪ್ರಮಾಣ ಪತ್ರ ಪಡೆದ ಪುತ್ತೂರು ತಾಲೂಕಿನ ಪ್ರಥಮ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆ ನಮ್ಮ ಶಾಲೆಗೆ ಸಂದಾಯವಾಗಿದೆ. ಈ ಬಾರಿ ರಾಜ್ಯದಲ್ಲಿ 19 ಶಾಲೆಗಳಿಗೆ ಐಎಸ್‍ಒ ಪ್ರಮಾಣಪತ್ರ ನೀಡಲಾಗಿದ್ದು, ಅದರಲ್ಲಿ 17 ಶಾಲೆಗಳು ಬೆಂಗಳೂರಿನಿಂದ ಆಯ್ಕೆಯಾಗಿವೆ. ರಾಜ್ಯದ ಇತರ ಭಾಗದಿಂದ 2 ಶಾಲೆಗಳು ಆಯ್ಕೆಯಾಗಿದ್ದು, ಅದರಲ್ಲಿ ಸಾಂದೀಪನಿಯೂ ಒಂದಾಗಿದೆ ಎಂದರು.

ಪ್ರತೀ ವರ್ಷ ಈ ಸಂಸ್ಥೆಯವರು ಶಾಲೆಗಳನ್ನು ಅಧ್ಯಯನ ಮಾಡಿ ಪ್ರಮಾಣ ಪತ್ರ ನೀಡುತ್ತಾರೆ. ಒಮ್ಮೆ ನೀಡಿದ ಪ್ರಮಾಣಪತ್ರಕ್ಕೆ 3 ವರ್ಷಗಳ ಅವಧಿ ಇದೆ. ಈ ಅವಧಿಯಲ್ಲಿ ಪ್ರತೀ ವರ್ಷ ನವೀಕರಣ ಮಾಡಬೇಕಾಗುತ್ತದೆ. ಶಾಲೆಯ ಗುಣಮಟ್ಟ ಮುಂದುವರಿದಿದ್ದರೆ ಮಾತ್ರ ನವೀಕರಣ ಮಾಡುತ್ತಾರೆ. ಇಲ್ಲದಿದ್ದರೆ ರದ್ದು ಮಾಡುತ್ತಾರೆ. ಸಂಸ್ಥೆಯ ತಂಡ 3 ತಿಂಗಳ ಹಿಂದೆ ಸಾಂದೀಪನಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿತ್ತು ಎಂದು ತಿಳಿಸಿದರು.

ಶಾಲೆಯಲ್ಲಿ ನೀಡಲಾಗುವ ಶಿಕ್ಷಣದ ಗುಣಮಟ್ಟ, ಆಂತರಿಕ ನಿರ್ವಹಣೆ, ಖರ್ಚುವೆಚ್ಚ ನಿರ್ವಹಣೆ, ದಕ್ಷತೆ ಮತ್ತು ಗುಣಮಟ್ಟ, ಸ್ಥಿರ ಫಲಿತಾಂಶಗಳು, ಅಳತೆ ಮತ್ತು ಮೇಲ್ವಿಚಾರಣೆ, ಶಾಲೆಯಲ್ಲಿ ನಡೆಯುವ ಚಟುವಟಿಕೆಗಳು, ಶಿಸ್ತು, ಸಮಯ ಪಾಲನೆ, ಜಾಗತಿಕವಾಗಿ ಗುರುತಿಸಲ್ಪಟ್ಟ ಮಾನದಂಡ ಇತ್ಯಾದಿ ಮಾನದಂಡಗಳನ್ನು ಮುಂದಿಟ್ಟುಕೊಂಡು ಅವರು ಪರಿಶೀಲನೆ ಮಾಡುತ್ತಾರೆ. ಅದರಲ್ಲಿ ಪುತ್ತೂರು ತಾಲೂಕಿನ ಏಕೈಕ ಅರ್ಹ ಶಾಲೆ ಯಾಗಿ ಸಾಂದೀಪನಿ ಮೂಡಿ ಬಂದಿದೆ.

ಈ ಪ್ರಮಾಣಪತ್ರದಿಂದಾಗಿ ಶಾಲೆಯ ಗುಣಮಟ್ಟಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಂತಾಗಿದೆ. ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ ಮೌಲ್ಯ ಗಳು ನಮ್ಮ ಶಾಲೆಯಲ್ಲಿದೆ ಎಂಬ ಹೆಮ್ಮೆ ಒಂದೆಡೆಯಾದರೆ, ಅದೇ ಮೌಲ್ಯಗಳನ್ನು ಭವಿಷ್ಯದಲ್ಲೂ ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮ ಮೇಲೆ ಬಿದ್ದಿದೆ.  160 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಇಂಟರ್‍ನ್ಯಾಶನಲ್ ಆರ್ಗನೈಸೇಶನ್ ಫಾರ್ ಸ್ಟಾಂಡರ್ಡೈಸೇಶನ್ ಸಂಸ್ಥೆಯು ಭಾರತದಲ್ಲಿ ದೆಹಲಿ ಮತ್ತು ಪುಣೆಗಳಲ್ಲಿ ಮಾತ್ರ ಶಾಖೆ ಹೊಂದಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್, ಶಾಲಾ ಮುಖ್ಯಶಿಕ್ಷಕಿ ಜಯಮಾಲಾ ವಿ.ಎನ್., ಆಡಳಿತ ಮಂಡಳಿ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ, ಪದಾಧಿಕಾರಿಗಳಾದ ವೇಣುಗೋಪಾಲ್, ಸುಬ್ರಾಯ ಬಿ.ಎಸ್.,  ಹರೀಶ್ ಪುತ್ತೂರಾಯ, ಸ್ಥಳೀಯ ಪ್ರಮುಖ ಜಯರಾಮ ಕಡಂಬಳಿತ್ತಾಯ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News