ಗಾಂಧಿ ಹತ್ಯೆಯಲ್ಲಿ ಗೋಡ್ಸೆ ಕೇವಲ ಆಯುಧ, ಅವನ ಹಿಂದಿದ್ದ ಸಿದ್ಧಾಂತವನ್ನು ಗಮನಿಸಬೇಕು

Update: 2019-09-19 15:39 GMT

ಚೆನ್ನೈ, ಸೆ.19: ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯ ಬಗ್ಗೆ ತಮಿಳು ನಟ ಸೂರ್ಯ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಗಾಂಧಿ ಹತ್ಯೆ ಪ್ರಕರಣದಲ್ಲಿ ನಾಥೂರಾಂ ಗೋಡ್ಸೆ ಕೇವಲ ಆಯುಧವಾಗಿದ್ದ ಅಷ್ಟೇ. ಆತನ ಬೆನ್ನ ಹಿಂದಿದ್ದ ವ್ಯವಸ್ಥೆಗಳನ್ನು, ಆತನನ್ನು ಪ್ರೇರೇಪಿಸಿದ ಸಿದ್ಧಾಂತಗಳ ಬಗ್ಗೆ ನಾವು ಗಮನಿಸಬೇಕು ಎಂದು ರಾಮಸ್ವಾಮಿ ಪೆರಿಯಾರ್ ಹೇಳಿದ್ದ ಮಾತನ್ನು ಸೂರ್ಯ ತಮ್ಮ ಮುಂಬರುವ ಸಿನೆಮಾ ‘ಕಾಪ್ಪನ್’ನ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸೂರ್ಯ, ಗಾಂಧೀಜಿಯವರ ಹತ್ಯೆಯಾದಾಗ ದೇಶದಾದ್ಯಂತ ಗಲಭೆ ಆರಂಭವಾಯಿತು. ಎಲ್ಲರೂ ಗೋಡ್ಸೆಯನ್ನು ಶಪಿಸುತ್ತಿದ್ದರು. ಆದರೆ ಪೆರಿಯಾರ್ ‘ಗೋಡ್ಸೆಯ ಬಂದೂಕವನ್ನು ತನ್ನಿ. ಅದನ್ನು ಚೂರು ಚೂರು ಮಾಡಿಬಿಡುವಾ’ ಎಂದರು. ಅವರ ಸುತ್ತ ಇದ್ದವರು ಗೊಂದಲಕ್ಕೆ ಒಳಗಾದಾಗ ತಮ್ಮ ಮಾತಿಗೆ ವಿವರಣೆ ನೀಡಿದ ಪೆರಿಯಾರ್, ಗಾಂಧಿಯವರ ಹತ್ಯೆಯಲ್ಲಿ ಗೋಡ್ಸೆಯನ್ನು ಆಯುಧದಂತೆ ಬಳಸಿದವರನ್ನು ಮೊದಲು ಹುಡುಕಬೇಕು ಎಂಬುದು ತನ್ನ ಮಾತಿನ ಅರ್ಥ ಎಂದು ತಿಳಿಸಿದರು ಎಂದು ಸೂರ್ಯ ಹೇಳಿದರು. ಸೂರ್ಯರ ಈ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸೂರ್ಯ ಹೇಳಿಕೆಯನ್ನು ಸಿಪಿಎಂ ಪಕ್ಷದ ತಮಿಳುನಾಡು ಘಟಕದ ಕಾರ್ಯದರ್ಶಿ ಕೆ ಬಾಲಕೃಷ್ಣನ್ ಬೆಂಬಲಿಸಿದ್ದಾರೆ. ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಗಾಂಧಿ ಹತ್ಯೆಯ ಬಗ್ಗೆ ಪೆರಿಯಾರ್ ಹೇಳಿಕೆ ಉಲ್ಲೇಖಿಸಿದ್ದಕ್ಕೆ ನಾವು ಅವರನ್ನು ಶ್ಲಾಘಿಸುತ್ತೇವೆ ಎಂದು ಬಾಲಕೃಷ್ಣನ್ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News