×
Ad

ಸರಕಾರಿ ಕಚೇರಿಯಿಂದಲೇ ಪ್ಲಾಸ್ಟಿಕ್ ಬಳಕೆ ನಿಲ್ಲಲ್ಲಿ: ದಿನಕರ ಬಾಬು

Update: 2019-09-19 21:30 IST

ಉಡುಪಿ, ಸೆ.19: ಸರಕಾರವೇ ರೂಪಿಸಿದ ಕಾನೂನುಗಳನ್ನು ಸರಕಾರದ ಅಧಿಕಾರಿಗಳೇ ಪಾಲಿಸದಿದ್ದರೆ ಕಾನೂನಿಗೆ ಬೆಲೆ ಇರುವುದಿಲ್ಲ. ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಮತ್ತು ಸರಕಾರಿ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿ ರುವುದು ಕಂಡುಬರುತ್ತಿದ್ದು, ಪ್ಲಾಸ್ಟಿಕ್ ನಿರ್ಮೂಲನೆ ಕ್ರಮಗಳು ಸರಕಾರಿ ಕಚೇರಿಗಳಿಂದಲೇ ಆರಂಭವಾಗಬೇಕು ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಗುರುವಾರ ಮಣಿಪಾಲದ ಜಿಪಂ ಆವರಣದಲ್ಲಿ ನಡೆದ ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಆಂದೋಲನ ಜಾಥಾ ಕಾರ್ಯಕ್ರಮವನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.

ಸರಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್‌ನಿಂದ ಸುತ್ತಿರುವ ಹೂಗುಚ್ಚಗಳನ್ನು ನೀಡುವುದಕ್ಕೆ ಕಡಿವಾಣ ಹಾಕುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬೇಕು. ಜಿಲ್ಲೆಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಮತ್ತು ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮ ಗಳ ಬಗ್ಗೆ ಜನಜಾಗೃತಿ ಮೂಡಿಸಲು ಗ್ರಾಮೀಣ ಮಟ್ಟದಲ್ಲಿ 15 ದಿನಗಳ ಕಾಲ 30 ಗ್ರಾಮಗಳಲ್ಲಿ ಜಾಥಾ ಕಾರ್ಯಕ್ರಮ ನಡೆಯಲಿದೆ. ಜಾಥಾ ಹಳ್ಳಿಹಳ್ಳಿಗಳಿಗೆ ತೆರಳಿ ಬೀದಿ ನಾಟಕದ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದವರು ನುಡಿದರು.

ಸ್ವಚ್ಛತಾ ಆಂದೋಲನದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ದೇಶದಲ್ಲೇ ಮೊತ್ತಮೊದಲ ಬಾರಿಗೆ ಪ್ಲಾಸ್ಟಿಕ್ ನಿಷೇಧದ ನಿರ್ಧಾರ ಕೈಗೊಂಡ ರಾಜ್ಯ ಕರ್ನಾಟಕ. ಆದರೂ ಪ್ಲಾಸ್ಟಿಕ್ ಬಳಕೆಯ ನಿಬರ್ಂಧವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲತೆಯನ್ನು ಅನುಭವಿಸುತ್ತಿದ್ದೇವೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವಿರುವವರೇ ಕಾನೂನನ್ನು ಪಾಲಿಸದಿದ್ದಲ್ಲಿ ಸಾರ್ವಜನಿಕರಿಗೆ ಹೇಳುವ ನೈತಿಕತೆ ಇರುವುದಿಲ್ಲ ಎಂದರು.

ಪ್ಲಾಸ್ಟಿಕ್ ಬಳಕೆ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಲು ಕಾನೂನಿನಲ್ಲಿ ದಂಡದ ವ್ಯವಸ್ಥೆ ಇದ್ದರೂ ಸರಿಯಾಗಿ ಪಾಲನೆ ಯಾಗುತ್ತಿಲ್ಲ.ಸರಕಾರದ ಆದೇಶವನ್ನು ಅಧಿಕಾರಿಗಳು ಸರಿಯಾಗಿ ಪಾಲಿಸಬೇಕು. ಕಾನೂನನ್ನು ಉಲ್ಲಂಸಿ ಪ್ಲಾಸ್ಟಿಕ್‌ನ್ನು ಬಳಕೆ ಮಾಡುವವರಿಗೆ ಮತ್ತು ಕಂಡ ಕಂಡಲ್ಲಿ ಎಸೆಯುವವರಿಗೆ ಒಂದು ತಿಂಗಳಿನ ಗಡುವಿನ ಎಚ್ಚರಿಕೆ ನೀಡಿ, ಒಂದು ವೇಳೆ ಗಡುವಿನೊಳಗೆ ಕಾನೂನು ಅನುಷ್ಠಾನಗೊಳಿಸದಿದ್ದಲ್ಲಿ ಅಂಥವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಭಾರೀ ದಂಡ ವಿಧಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಶಿಕ್ಷಣಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಂತ್ ಪಡುಬಿದ್ರಿ, ಜಿಪಂ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಉಪಸ್ಥಿತರಿದ್ದರು.

ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಗಣೇಶಪುರ ಸಿದ್ದಿ ವಿನಾಯಕ ಯಕ್ಷಗಾನ ಮಂಡಳಿಯ ಕಲಾವಿದರಿಂದ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಬೀದಿನಾಟಕ ಪ್ರದರ್ಶನ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News