ರಾಹುಲ್ ಕ್ಷಮೆ ಯಾಚನೆಗೆ ದಿಗ್ವಿಜಯ ಸಿಂಗ್ ಸಹೋದರನ ಆಗ್ರಹ

Update: 2019-09-19 16:03 GMT

ಭೋಪಾಲ, ಸೆ.19: ಮಧ್ಯಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 10 ದಿನದೊಳಗೆ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದ ರಾಹುಲ್ ಗಾಂಧಿ ಭರವಸೆ ಈಡೇರಿಸಲು ವಿಫಲವಾಗಿದ್ದರಿಂದ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸಿಂಗ್ ಆಗ್ರಹಿಸಿದ್ದಾರೆ.

ಲಕ್ಷ್ಮಣ್ ಸಿಂಗ್ ಕಾಂಗ್ರೆಸ್‌ ಹಿರಿಯ ಮುಖಂಡ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರ ಕಿರಿಯ ಸಹೋದರ. ಈಡೇರಿಸಲು ಸಾಧ್ಯವಾಗದ ಇಂತಹ ಭರವಸೆ ನೀಡಲೇಬಾರದು. ಇದೀಗ ರಾಜ್ಯದ ರೈತರ ಸಂಪೂರ್ಣ ಸಾಲವನ್ನು ಯಾವಾಗ ಮನ್ನಾ ಮಾಡಲಾಗುತ್ತದೆ ಎಂಬುದನ್ನು ಪಕ್ಷ ಸ್ಪಷ್ಟಪಡಿಸಬೇಕು ಎಂದವರು ಹೇಳಿದ್ದಾರೆ.

ಎಲ್ಲಾ ಕಾಂಗ್ರೆಸ್ ಶಾಸಕರಿಗೂ ರೈತರಿಂದ ಪ್ರಶ್ನೆ ಎದುರಾಗುತ್ತಿದೆ. ಸರಕಾರ ಸಾಲಮನ್ನಾದ ಪತ್ರ ನೀಡಿದ್ದರೂ ಈ ಬಗ್ಗೆ ಸರಕಾರದಿಂದ ಮಾಹಿತಿ ಬಂದಿಲ್ಲ. ಆದ್ದರಿಂದ ಸಾಲ ಮರುಪಾವತಿಸಲು ಸಂಬಂಧಿತ ಬ್ಯಾಂಕ್ ‌ನವರು ಸೂಚಿಸುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಏನು ಮಾಡಬೇಕು ಎಂದವರು ಪ್ರಶ್ನಿಸಿದರು.

ಪಕ್ಷದ ನಾಯಕರು ಆಯ್ದ ಕೆಲವು ಮುಖಂಡರನ್ನು ಮಾತ್ರ ಭೇಟಿಯಾಗುತ್ತಾರೆ. ಪಕ್ಷವನ್ನು ಬಲಪಡಿಸಬೇಕಿದ್ದರೆ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿರಬೇಕು. ಇದು ಹೀಗೆಯೇ ಮುಂದುವರಿದರೆ ಪಕ್ಷಕ್ಕೆ ಒಳಿತಾಗದು . ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದು ಪಕ್ಷದ ಮುಖಂಡರನ್ನು ಭೇಟಿಯಾಗುತ್ತಾರೆ. ಆದರೆ ಸೋನಿಯಾ ಗಾಂಧಿ ಯಾಕೆ ಹೀಗೆ ಮಾಡುತ್ತಿಲ್ಲ ಎಂದು ಜನರಾಡಿಕೊಳ್ಳುತ್ತಿದ್ದಾರೆ ಎಂದು ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.

ಸಚಿವ ಹುದ್ದೆಗೆ ತನ್ನನ್ನು ಪರಿಗಣಿಸಿಲ್ಲ ಎಂದು ಲಕ್ಷ್ಮಣ್ ಸಿಂಗ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಕಳೆದ ತಿಂಗಳು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿರುವ ಕೇಂದ್ರ ಸರಕಾರದ ಕ್ರಮವನ್ನು ಲಕ್ಷ್ಮಣ್ ಸಿಂಗ್ ಸ್ವಾಗತಿಸಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News