ಸಾಹಿತಿ, ರಂಗಸಾಧಕ ಜಿ.ಕೆ.ಐತಾಳ್ ನಿಧನ

Update: 2019-09-19 16:16 GMT

ಉಡುಪಿ, ಸೆ.19: ಖ್ಯಾತ ಸಾಹಿತಿ, ರಂಗ ಸಾಧಕ ಹಾಗೂ ನಿವೃತ್ತ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಜಿ.ಕೆ.ಐತಾಳ್ ಅವರು ಇಂದು ಬೆಳಗ್ಗೆ ಕೋಟೇಶ್ವರದಲ್ಲಿ ರುವ ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 68 ವರ್ಷ ಪ್ರಾಯವಾಗಿತ್ತು.

ಕನ್ನಡದ ಪ್ರಮುಖ ಸಣ್ಣ ಕಥೆಗಾರರಲ್ಲಿ ಒಬ್ಬರಾದ ಜಿ.ಕೆ.ಐತಾಳ್ ಸುಮಾರು 500ಕ್ಕೂ ಅಧಿಕ ಸಣ್ಣಕತೆಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆ ಹಾಗೂ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಅವರ ‘ಕುಜ’ ಕಾದಂಬರಿಗೆ ರಾಜ್ಯ ಪ್ರಶಸ್ತಿಯೂ ದೊರೆತಿದೆ. ಇವರು ಉತ್ತಮ ಅನುವಾದಕರೂ ಆಗಿದ್ದಾರೆ. ಇವರ ಕಾದಂಬರಿಗಳು ಧಾರಾವಾಹಿಗಳಾಗಿ ಪ್ರಕಟಗೊಂಡಿವೆ.

ರಂಗಭೂಮಿಯ ಸಾಧಕರಲ್ಲೊಬ್ಬರಾದ ಇವರು ಕುಂದಾಪುರದ ರೂಪಕಲಾ ಹಾಗೂ ಉಡುಪಿಯ ರಂಗಭೂಮಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ನಟ, ನಿರ್ದೇಶಕರಾಗಿಯೂ ಜನಪ್ರಿಯತೆ ಪಡೆದಿದ್ದ ಇವರು ಕೆಲವು ನಾಟಕಗಳನ್ನು ರಚಿಸಿದ್ದಾರೆ. ಕೋಟೇಶ್ವರ ಹಾಗೂ ಕುಂದಾಪುರದ ಹಲವು ಸಂಘ ಸಂಸ್ಥೆಗಳಲ್ಲಿ ಅವರು ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿದಂತೆ ನಾಡಿನ ಹಲವು ಪ್ರಮುಖ ಪ್ರಶಸ್ತಿಗಳನ್ನು ಪಡೆದಿರುವ ಜಿ.ಕೆ.ಐತಾಳ್ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News