ಸೆ.22ಕ್ಕೆ ಶ್ರೀಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ

Update: 2019-09-19 16:20 GMT

ಉಡುಪಿ, ಸೆ.19: ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಹಾಗೂ ಇತರ ಸಂಘಟನೆಗಳ ಸಹಕಾರದೊಂದಿಗೆ ಸೆ.22ರ ಬೆಳಗ್ಗೆ ಲೋಕಕಲ್ಯಾಣಾರ್ಥ ಉಡುಪಿ ಶ್ರೀಕೃಷ್ಣನಿಗೆ ಕೋಟಿ ತುಳಸಿ ಅರ್ಚನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥರು ತಿಳಿಸಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಸಂಕಲ್ಪಿಸಿದಂತೆ ಪ್ರತಿದಿನ ಲಕ್ಷ ತುಳಸಿ ಅರ್ಚನೆ ಶ್ರೀಕೃಷ್ಣನಿಗೆ ನಡೆಯುತಿದ್ದು, ತಮ್ಮ ಪರ್ಯಾಯಾವಧಿಯಲ್ಲಿ ನಡೆಯುತ್ತಿರುವ ಎರಡನೇ ಕೋಟಿ ತುಳಸಿ ಅರ್ಚನೆ ಇದಾಗಿದೆ ಎಂದರು.

ಈ ಬಾರಿಯ ಕೋಟಿ ತುಳಸಿ ಅರ್ಚನೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗ್ಗೆ 7 ರಿಂದ ಅಪರಾಹ್ನ 12 ರವರೆಗೆ ನಡೆಯಲಿದೆ. ಇದರೊಂದಿಗೆ ನಡೆಯುವ ವಿಷ್ಣು ಸಹಸ್ರನಾಮ ಪಾರಾಯಣದಲ್ಲೂ ವಿಪ್ರ ಸಮುದಾಯ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ ಪಲಿಮಾರುಶ್ರೀ, ಮುಂಜಾನೆ 7 ರಿಂದ ಒಟ್ಟು ನಾಲ್ಕು ಹಂತದಲ್ಲಿ ಇದು ನಡೆಯಲಿದೆ ಎಂದರು.

ಈ ಕೋಟಿ ತುಳಸಿ ಅರ್ಚನೆಯಲ್ಲಿ ಅಷ್ಟಮಠಗಳ ಯತಿಗಳಾದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀವಿದ್ಯಾ ರಾಜೇಶ್ವರ ತೀರ್ಥ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷ ಹಾಗೂ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಂ. ಮಂಜುನಾಥ ಉಪಾಧ್ಯ, ಜೊತೆ ಕಾರ್ಯದರ್ಶಿ ನಾಗರಾಜ ಉಪಾಧ್ಯ, ಪಲಿಮಾರು ಮಠದ ಶ್ರೀಶ ಭಟ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News