ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆ; ಒಳ್ಳೆಯ ಭತ್ತದ ಫಸಲಿನ ನಿರೀಕ್ಷೆ

Update: 2019-09-19 16:22 GMT

 ಉಡುಪಿ, ಸೆ.19: ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಈವರೆಗೆ 4,100ಮಿ.ಮೀ ವಾಡಿಕೆ ಮಳೆ ಬರಬೇಕಾಗಿದ್ದು, ಪ್ರಸ್ತುತ 4,400ಮಿ.ಮೀ ಮಳೆಯಾಗಿದೆ. ಇದರಿಂದ ಜಿಲ್ಲೆಯಾದ್ಯಂತ ಬಹಳ ಉತ್ತಮ ಭತ್ತದ ಬೆಳೆಯ ನಿರೀಕ್ಷೆ ಇದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ, ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಈ ಬಾರಿ ಮಳೆ ಬಿಟ್ಟು ಬಿಟ್ಟು ಬಂದಿದ್ದು, ಭತ್ತದ ಬೆಳೆಗೆ ಪೂರಕವಾಗಿದೆ. 35,470 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಫಸಲು ಉತ್ತಮವಾಗಿ ಬಂದಿದೆ. ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ, ಹಿಂಗಾರು ಬೆಳೆಗೆ ಅಗತ್ಯರುವ ಭಿತ್ತನೆ ಬೀಜದ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಅವರು ಸಭೆಗೆ ತಿಳಿಸಿದರು.

ಜಿಲ್ಲೆಯ ಗ್ರಾಪಂಗಳ ವ್ಯಾಪ್ತಿಯಲ್ಲಿ ಬಿಎಸ್‌ಎನ್‌ಎಲ್ ಸೇರಿದಂತೆ ಸುಮಾರು 500 ಮೊಬೈಲ್ ಟವರ್‌ಗಳಿದ್ದು, ಎಲ್ಲಾ ಟವರ್‌ಗಳಿಂದ ನಿಗದಿತ ತೆರಿಗೆಯನ್ನು ವಸೂಲಿ ಮಾಡುವಂತೆ ಅಧ್ಯಕ್ಷ ದಿನಕರಬಾಬು ಸೂಚಿಸಿದರು. ಗ್ರಾಪಂಗಳ ತೆರಿಗೆ ಸಂಗ್ರಹದ ಕುರಿತು ಪಂಚತಂತ್ರ ತಂತ್ರಾಂಶದ ಮೂಲಕವೇ ದಾಖಲು ಮಾಡುವಂತೆ ಅವರು ತಿಳಿಸಿದರು.

ಕುಡಿಯುವ ನೀರು ಯೋಜನೆ ಕುರಿತು ಕೈಗೊಳ್ಳಲಾಗುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಮತ್ತು ಕಾಲುಸಂಕಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸುವಂತೆ, ಬೆಳ್ಮಣ್ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಅಪಘಾತ ತಡೆಗೋಡೆಗಳನ್ನು ಆದ್ಯತೆಯ ಮೇಲೆ ನಿರ್ಮಿಸುವಂತೆ ಅಧ್ಯಕ್ಷರು ಸಂಬಂಧಿತ ಅಧಿಕಾರಿಗಳಿಗೆ ಹೇಳಿದರು.

ಜಿಲ್ಲೆಯ ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಪುಸ್ತಕಗಳು ಸಂಪೂರ್ಣವಾಗಿ ಬಂದಿದ್ದು, ಶೂ ಖರೀದಿ ಮತ್ತು ವಿತರಣೆ ಕಾರ್ಯ ಎಸ್‌ಡಿಎಂಸಿ ಮೂಲಕ ಪ್ರಗತಿಯಲ್ಲಿದೆ ಎಂದು ಡಿಡಿಪಿಐ ಶೇಷಶಯನ ಕಾರಿಂಜ ಮಾಹಿತಿ ನೀಡಿದರು.

ಮೀನುಗಾರರ ಆಗಸ್ಟ್ ತಿಂಗಳ ಡೀಸೆಲ್ ಸಬ್ಸಿಡಿ ಮೊತ್ತ ಬಂದಿದ್ದು, 10 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಾರ್ಶ್ವನಾಥ್ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 1,050 ಪಂಪ್‌ಸೆಟ್‌ಗಳಿಗೆ ವಿದ್ಯುತ್ ಒದಗಿಸಲಾಗಿದೆ ಮತ್ತು ಸೌಭಾಗ್ಯ ಯೋಜನೆಯಡಿ 1,400 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಮೆಸ್ಕಾಂ ಅಧಿಕಾರಿ ಸಭೆಗೆ ತಿಳಿಸಿದರು.

ಹಣ್ಣಿನ ಸಸಿಗಳ ವಿತರಣೆಯಲ್ಲಿ 13,25,000 ಸಸಿ ವಿತರಣೆಯ ಗುರಿ ಹೊಂದಿದ್ದು, ಅದರಲ್ಲಿ 10,24,000 ಸಸಿಗಳನ್ನು ಈಗಾಗಲೇ ವಿತರಣೆ ಮಾಡಿ ಶೇ.77ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ ಸಭೆಗೆ ತಿಳಿಸಿದರು. ಸಸಿ ಬೆಳೆಸುವ ಮತ್ತು ನೆಡು ತೋಪು ನೆಡುವ ಕಾರ್ಯದಲ್ಲಿ ಶೇ.100ರಷ್ಟು ಸಾಧನೆ ಮಾಡಲಾಗಿದೆ ಮತ್ತು ತಾಲೂಕು ಮಟ್ಟದಲ್ಲಿ ಫಲಾನುಭವಿಗಳ ಆಯ್ಕೆ ನಡೆದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ವಿವರಿಸಿದರು.

 ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮದಡಿ ಪೆಂಟಾವೇಲೆಂಟ್ ಮತ್ತು ಪೋಲಿಯೊ ಲಸಿಕೆಯಲ್ಲಿ ಶೇ.96 ಹಾಗೂ ಬಿಸಿಜಿ ಮತ್ತು ದಡಾರ ಲಸಿಕೆಯಲ್ಲಿ ಶೇ.97 ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಎಂ.ಜಿ.ರಾಮ ಸಭೆಗೆ ತಿಳಿಸಿದರು. ಪಶುಗಳಲ್ಲಿ ಕಾಲುಬಾಯಿ ರೋಗ ತಡೆಯಲು ಜಾನುವಾರುಗಳಿಗೆ 16ನೇ ಸುತ್ತಿನ ಲಸಿಕೆ ಆರಂಭಿಸಲಾಗುವುದು ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಸರ್ವೋತ್ತಮ ಉಡುಪ ತಿಳಿಸಿದರು.

ಸಕಾಲ ಅರ್ಜಿ ಅಂಗೀಕಾರ ಮತ್ತು ವಿತರಣೆಯನ್ನು ಕಡ್ಡಾಯವಾಗಿ ಆನ್ ಲೈನ್ ಮೂಲಕವೇ ಮಾಡಬೇಕು. ಶೂನ್ಯ ಫಲಿತಾಂಶ ದಾಖಲಿಸಿದ ಜಿಲ್ಲೆಯ 98 ಗ್ರಾಪಂಗಳಿಗೆ ಈಗಾಗಲೇ ಈ ಬಗ್ಗೆ ನೋಟಿಸ್ ನೀಡಲಾಗಿದೆ ಎಂದು ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಬಾಬು ಶೆಟ್ಟಿ, ಶಶಿಕಾಂತ್ ಪಡುಬಿದ್ರಿ, ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಪ್ರೀತಿ ಗೆಹ್ಲೋಟ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News