ಕೇಂದ್ರ, ರಾಜ್ಯ ಸರ್ಕಾರದಿಂದ ಜನವಿರೋಧಿ ಕಾನೂನು, ನೀತಿ-ಆರೋಪ: ಎಸ್‍ಡಿಪಿಐ ಪ್ರತಿಭಟನೆ

Update: 2019-09-19 16:34 GMT

ಪುತ್ತೂರು: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳು ಜನವಿರೋಧಿ ಕಾನೂನುಗಳು ಹಾಗೂ ಜನವಿರೋಧಿ ನೀತಿಗಳ ಮೂಲಕ ನಿರಂತರವಾಗಿ ಜನತೆಯನ್ನು ಶೋಷಣೆ ಮಾಡುವುದರಲ್ಲಿ ತಲ್ಲೀನವಾಗಿವೆ. ದೇಶದಲ್ಲಿ ಬದಲಾವಣೆ ತರುತ್ತೇವೆ, ಅಚ್ಚೇದಿನ್ ತರುತ್ತೇವೆ ಎಂದು ಜನತೆಯಲ್ಲಿ ಕನಸು ಬಿತ್ತಿ ಶೋಷಣೆ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಹೊಸ ನೀತಿ ಹಾಗೂ ಕಾನೂನುಗಳ ಮೂಲಕ ಹಿಂದುತ್ವದ ಫ್ಯಾಸಿಸ್ಟ್ ಮನೋಸ್ಥಿತಿಯನ್ನು ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಆರೋಪಿಸಿದರು.

ಪುತ್ತೂರು ನಗರದ ಬಸ್ ನಿಲ್ದಾಣದ ಬಳಿ ಗುರುವಾರ ಸಂಜೆ ಕೇಂದ್ರ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ರದ್ದುಗೊಳಿಸಿ, ರಾಷ್ಟ್ರೀಯ ಮತ್ತು ರಾಜ್ಯ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಗೆ ಕಟ್ಟುನಿಟ್ಟಿನ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿ ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಅವೈಜ್ಞಾನಿಕ ಜಿಎಸ್‍ಟಿ ನೀತಿ, ನೋಟು ಅಮಾನ್ಯದಂತಹ ನೀತಿಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟು ಹೋಗಿದ್ದು, ಜಿಡಿಪಿ ಸಂಪೂರ್ಣ ಕುಸಿದಿದೆ. ಬಹಳಷ್ಟು ಉದ್ಯಮಗಳು ಮುಚ್ಚುವ ಸ್ಥಿತಿಗೆ ತಲುಪಿದ್ದು, ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕಿದ್ದ ಮಂದಿಗೆ ಜೀವಿಸಲು ಸಾಧ್ಯ ವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರದ ಯಾವ ನೀತಿ-ಕಾನೂನಗಳಿಂದಲೂ ಜನತೆಗೆ ಒಂದಿಷ್ಟು ಪ್ರಯೋಜನವಾಗಿಲ್ಲ ಎಂದು ಅವರು ದೂರಿದರು.

ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಮಾಡಿ ದೊಡ್ಡ ಮಟ್ಟದ ದಂಡ ವಿಧಿಸುವ ಕೆಲಸವನ್ನು ಜನತೆಗೆ ಒಳಿತಾಗಬೇಕು ಎಂಬ ಉದ್ದೇಶದಿಂದ ಮಾಡಿಲ್ಲ. ಬದಲಾಗಿ ದೊಡ್ಡ ಉದ್ಯಮಿಗಳಿಗೆ ಪ್ರಯೋಜನವಾಗುವ, ಇನ್ಸೂರೆನ್ಸ್ ಕಂಪನಿಗಳಿಗೆ ಪ್ರೋತ್ಸಾಹ-ಸಹಕಾರ ನೀಡುವ ಉದ್ದೇಶದಿಂದ ಮಾಡಲಾಗಿದೆ. ಇದೀಗ ಬಡಪಾಯಿಗಳು ದಂಡ ಪಾವತಿಸಲು ಸಾಧ್ಯವಾಗದೆ  ತಮ್ಮ ವಾಹನವನ್ನೇ ಪೊಲೀಸರಿಗೆ ಬಿಟ್ಟು ಕೊಡುವ ಪರಿಸ್ಥಿತಿ ಬಂದಿದೆ. ಎಲ್ಲಾ ವಿಧದಲ್ಲೂ ಸರ್ಕಾರ ಜನತೆಯನ್ನು ಶೋಷಣೆಗೆ ಒಳಪಡಿಸಿದೆ ಎಂದು ಅವರು ಆರೋಪಿಸಿದರು.

ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಸಿದ್ದೀಕ್, ಎಸ್‍ಡಿಟಿಯು ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕ, ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಪಕ್ಷದ ಪ್ರಮುಖರಾದ ಅಬ್ದುಲ್ ಹಮೀದ್ ಸಾಲ್ಮರ, ಶಾಕೀರ್ ಅಳಕೆಮಜಲು,ಹಮೀದ್ ಹಾಜಿ ಮೆಜೆಸ್ಟಿಕ್, ಅಝೀಝ್ ಕಬಕ, ಅಶ್ರಫ್ ಬಾವು, ಯಾಹ್ಯಾ ಕೂರ್ನಡ್ಕ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟನೆಯ ಬಳಿಕ ಎಸ್‍ಡಿಪಿಐ ಮುಖಂಡರು ಪುತ್ತೂರಿನ ಮಿನಿವಿಧಾನ ಸೌಧಕ್ಕೆ ನಿಯೋಗದಲ್ಲಿ ತೆರಳಿ ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News