ಅಮಿತ್ ಶಾರನ್ನು ಭೇಟಿಯಾದ ಮಮತಾ ಬ್ಯಾನರ್ಜಿ: ಎನ್‌ಆರ್‌ಸಿಯಲ್ಲಿ 19 ಲಕ್ಷ ಜನರು ಹೊರಗುಳಿದ ಬಗ್ಗೆ ಚರ್ಚೆ

Update: 2019-09-19 16:38 GMT

ಹೊಸದಿಲ್ಲಿ, ಸೆ. 19: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಒಂದು ದಿನದ ಬಳಿಕ ಗುರುವಾರ ದಿಲ್ಲಿಯ ನಾರ್ತ್ ಬ್ಲಾಕ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ಸಂದರ್ಭ ಮಮತಾ ಬ್ಯಾನರ್ಜಿ ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಬಗ್ಗೆ ಅಮಿತ್ ಶಾ ಅವರ ಗಮನ ಸೆಳೆದರು. ಆದರೆ, ಪಶ್ಚಿಮಬಂಗಾಳದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಸಲಿಲ್ಲ.

2019ರ ಲೋಕಸಭಾ ಚುನಾವಣೆ ಬಳಿಕ ಮಮತಾ ಬ್ಯಾನರ್ಜಿ ಅವರು ಅಮಿತ್ ಶಾ ಅವರನ್ನು ಭೇಟಿಯಾಗುತ್ತಿರುವುದು ಇದೇ ಮೊದಲು. ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ‘‘ನಾನು ಗೃಹ ಸಚಿವರೊಂದಿಗೆ ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ವಿಷಯದ ಬಗ್ಗೆ ಚರ್ಚಿಸಿದ್ದೇನೆ ಹಾಗೂ ಪತ್ರವೊಂದನ್ನು ನೀಡಿದ್ದೇನೆ. ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಬಿಟ್ಟು ಹೋದ 19 ಲಕ್ಷ ಜನರ ಬಗ್ಗೆ ಮಾತನಾಡಿದ್ದೇನೆ. ಇವರಲ್ಲಿ ಕೆಲವರು ಹಿಂದಿ, ಬೆಂಗಾಳಿ, ಗೂರ್ಖಾ ಮಾತನಾಡುವ ಹಾಗೂ ಪ್ರಾಮಾಣಿಕ ಭಾರತೀಯ ಮತದಾರರು ಎಂದು ತಿಳಿಸಿದ್ದೇನೆ’’ ಎಂದರು.

ಪಶ್ಚಿಮಬಂಗಾಳದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೆ ತರುವ ವಂದತಿ ಬಗ್ಗೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ವದಂತಿ ತಳ್ಳಿ ಹಾಕಿದರು ಹಾಗೂ ಅಮಿತ್ ಶಾ ಅವರೊಂದಿಗಿನ ಪುಟ್ಟ ಭೇಟಿಯಲ್ಲಿ ಈ ಬಗ್ಗೆ ಮಾತನಾಡಿಲ್ಲ ಎಂದರು. ‘‘ಪಶ್ಚಿಮಬಂಗಾಳದಲ್ಲಿ ಪೌರತ್ವ ನೋಂದಣಿ ಜಾರಿಗೊಳಿಸುವ ಬಗ್ಗೆ ಅಮಿತ್ ಶಾ ಅವರು ಮಾತನಾಡಿಲ್ಲ. ಅಲ್ಲಿ ಪೌರತ್ವ ನೋಂದಣಿಯ ಅಗತ್ಯ ಇಲ್ಲ’’ ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News