ವಾಹನ ಚಾಲಕರು ಲೈಸೆನ್ಸ್ ಸೇರಿ ಇತರ ದಾಖಲೆಗಳನ್ನು ಹೊತ್ತು ತಿರುಗಬೇಕಿಲ್ಲ, ಈ 2 ಆ್ಯಪ್ ಗಳಿದ್ದರೆ ಸಾಕು…

Update: 2019-09-19 16:56 GMT

ದೇಶಾದ್ಯಂತ ಮೋಟರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಬಳಿಕ ವಾಹನ ಸವಾರರಲ್ಲಿ ದಂಡದ ಮೊತ್ತ ಮತ್ತು ಇನ್ನಿತರ ವಿಚಾರಗಳ ಬಗ್ಗೆ ಗೊಂದಲಗಳಿವೆ. ಚಾಲನಾ ಪರವಾನಿಗೆ (ಡ್ರೈವಿಂಗ್ ಲೈಸೆನ್ಸ್), ಆರ್ ಸಿ, ಇನ್ಸೂರೆನ್ಸ್ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಸ್ಮಾರ್ಟ್ ಫೋನ್ ಗಳಲ್ಲಿ ಡಿಜಿಟಲ್ ರೂಪದಲ್ಲಿ ಅಧಿಕಾರಿಗಳಿಗೆ ನೀಡಬಹುದೇ ಎನ್ನುವುದು ಎಲ್ಲರಲ್ಲಿರುವ ಗೊಂದಲವಾಗಿದೆ.

ಡಿಜಿಟಲ್ ರೂಪದಲ್ಲಿ ದಾಖಲೆಗಳ ಬಳಕೆಯ ಬಗ್ಗೆ ಹಲವರಲ್ಲಿ ಗೊಂದಲಗಳಿದ್ದು, ಪೊಲೀಸರು ತಪಾಸಣೆ ವೇಳೆ ಇಂತಹ ದಾಖಲೆಗಳನ್ನು ಪರಿಗಣಿಸುವುದಿಲ್ಲ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ಆದರೆ ಈ ಗೊಂದಲಗಳಿಗಿರುವ ಉತ್ತರ 'ಹೌದು… ವಾಹನ ಸವಾರರು ಡಿಜಿಟಲ್ ರೂಪದಲ್ಲಿರುವ ಲೈಸೆನ್ಸ್, ಆರ್ ಸಿ, ಇನ್ಶೂರೆನ್ಸ್ ಇನ್ನಿತರ ದಾಖಲೆಗಳನ್ನು ಅಧಿಕಾರಿಗಳಿಗೆ ತೋರಿಸಬಹುದು ಮತ್ತು ಅಧಿಕಾರಿಗಳು ಈ ದಾಖಲೆಗಳನ್ನು ಪರಿಗಣಿಸಲೇಬೇಕು'.

ಸ್ಮಾರ್ಟ್ ಫೋನ್ ಗಳ ಮೂಲಕ ಡಿಜಿಟಲ್ ದಾಖಲೆಗಳನ್ನು ವಾಹನ ಸವಾರರು ಸಲ್ಲಿಸಬಹುದಾದ ತಿದ್ದುಪಡಿಗಳಿಗಿಂತ ಮೊದಲೇ ಮೋಟರ್ ವಾಹನ ತಿದ್ದುಪಡಿ ಕಾಯ್ದೆಯನ್ನು ರಚಿಸಲಾಗಿತ್ತು. ಸ್ಮಾರ್ಟ್ ಫೋನ್ ಗಳ ಮೂಲಕ ವಾಹನ ಸವಾರರು ಸಲ್ಲಿಸುವ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ವೀಕರಿಸಬೇಕು ಎನ್ನುವುದನ್ನೂ ಕಾಯ್ದೆ ಕಡ್ಡಾಯಗೊಳಿಸಿದೆ.

ಆದರೆ ಈ ದಾಖಲೆಗಳ ಸ್ಕ್ಯಾನ್ ಪ್ರತಿಗಳು ಸ್ವೀಕಾರಾರ್ಹವಲ್ಲ. ಸವಾರರು ಡಿಜಿಲಾಕರ್ (digilocker) ಅಥವಾ mparivahan ಆ್ಯಪ್ ಗಳಲ್ಲಿ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ಡಿಸಿಪಿ ಲಕ್ಷ್ಮೀ ಗಣೇಶ್, ಡಿಜಿಲಾಕರ್ ಮತ್ತು ಎಂಪರಿವಾಹನ್ ಆ್ಯಪ್ ಗಳನ್ನು ಉಪಯೋಗಿಸಿ ಡಿಜಿಟಲ್ ದಾಖಲೆಗಳನ್ನು ನೀಡಬಹುದು ಮತ್ತು ಸವಾರರು ಮೂಲ ದಾಖಲೆಗಳನ್ನು ಒಯ್ಯಬೇಕಾದ ಅಗತ್ಯವೇನಿಲ್ಲ. ಆದರೆ ಈ ಆ್ಯಪ್ ಗಳಲ್ಲಿ ಮಾಲಿನ್ಯ ತಪಾಸಣಾ ಪ್ರಮಾಣಪತ್ರವನ್ನು ಡಿಜಿಟಲ್ ರೂಪದಲ್ಲಿ ತೋರಿಸಲು ಸಾಧ್ಯವಿಲ್ಲ ಮತ್ತು ಅದಕ್ಕೆ ಅವಕಾಶವಿಲ್ಲ. ಆದ್ದರಿಂದ ವಾಹನ ಸವಾರರು ಮಾಲಿನ್ಯ ತಪಾಸಣೆಯ ಮೂಲ ಪ್ರಮಾಣಪತ್ರವನ್ನು ಒಯ್ಯಬೇಕಾಗಿದೆ ಎಂದರು.

“ಈ ಎರಡೂ ಆ್ಯಪ್ ಗಳಲ್ಲಿರುವ ವಾಹನ ಸವಾರರ ದಾಖಲೆಗಳನ್ನು ಎಲ್ಲಾ ಅಧಿಕಾರಿಗಳು ಸ್ವೀಕರಿಸಲೇಬೇಕು. ಇದನ್ನು ಯಾರೂ ನಿರಾಕರಿಸಬಾರದು. ಇದು ಕೇಂದ್ರ ಸರಕಾರದ ಆದೇಶ ಮತ್ತು ತಿದ್ದುಪಡಿ ಈಗ ಕಾನೂನಾಗಿದೆ” ಎಂದವರು ಹೇಳಿದರು.

ಡಿಜಿಲಾಕರ್ ಎಂದರೇನು?, ಅದರ ಬಳಕೆ ಹೇಗೆ?

ಡಿಜಿಟಲ್ ರೂಪದಲ್ಲಿ ದಾಖಲೆಗಳನ್ನು ನೀಡುವ ಮತ್ತು ಪರಿಶೀಲಿಸುವ ಆ್ಯಪ್ ಆಗಿದೆ. ಡಿಜಿಲಾಕರ್. ಪತ್ರರೂಪದಲ್ಲಿರುವ ದಾಖಲೆಗಳನ್ನು ಒಯ್ಯಬೇಕು ಎನ್ನುವ ವಾಹನ ಸವಾರರ ಸಂಕಷ್ಟಕ್ಕೆ ಈ ಆ್ಯಪ್ ಅತ್ಯಂತ ಸಹಕಾರಿ. ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್ ಗಳ ಮೂಲಕ ಈ ಆ್ಯಪನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಸಿಬಿಎಸ್ ಇ, ರಿಜಿಸ್ಟರ್ ಆಫೀಸ್, ಆದಾಯ ತೆರಿಗೆ ಇಲಾಖೆ ಮತ್ತಿತರ ದಾಖಲೆಗಳು ಡಿಜಿಟಲ್ ರೂಪದಲ್ಲಿ ಈ ಆ್ಯಪ್ ನಲ್ಲಿ ಸಿಗುತ್ತದೆ. ಸರಕಾರವೇ ಅಧಿಕೃತವಾಗಿ ಈ ದಾಖಲೆಗಳನ್ನು ನೀಡುವುದರಿಂದ ವ್ಯಕ್ತಿಯೊಬ್ಬನ ದಾಖಲೆಗಳಿಗೆ ಈ ಆ್ಯಪ್ ದೃಢೀಕರಣವನ್ನು ನೀಡುತ್ತದೆ.

ಎಂಪರಿವಾಹನ್ ಏನು?, ಇದರ ಬಳಕೆ ಹೇಗೆ?

ಮೊಬೈಲ್ ಆ್ಯಪ್ ಮೂಲಕ ಜನರಿಗೆ ಸಂಚಾರ ಸೇವೆಯ ಅವಕಾಶ ನೀಡುವ ಆ್ಯಪ್ ಆಗಿದೆ ಎಂಪರಿವಾಹನ್. ವಿವಿಧ ಮಾಹಿತಿಗಳು, ಸೇವೆಗಳು ಮತ್ತು ಸಾರಿಗೆ ವ್ಯವಸ್ಥೆಗೆ ಸೇರಿದ ಉಪಯುಕ್ತತೆಗಳನ್ನು ಈ ಆ್ಯಪ್ ಜನರಿಗೆ ನೀಡುತ್ತದೆ.

ಆಲ್ ಇಂಡಿಯಾ ಆರ್ ಟಿಒ ವಾಹನ ರಿಜಿಸ್ಟ್ರೇಶನ್ ಸಂಖ್ಯೆಗಳ ಹುಡುಕಾಟಕ್ಕೆ ಇದು ಸರಕಾರದ ಆ್ಯಪ್ ಆಗಿದೆ. ಇದು ಮಾಲಕನ ಹೆಸರು, ನೋಂದಣಿ ದಿನಾಂಕ, ನೋಂದಣಿ ಪ್ರಾಧಿಕಾರ, ಇನ್ಶೂರೆನ್ಸ್ ವಾಯಿದೆ ಹೀಗೆ ಹಲವು ಮಾಹಿತಿಗಳನ್ನು ಈ ಆ್ಯಪ್ ನೀಡುತ್ತದೆ.

Writer - ಇಸ್ಮಾಯೀಲ್ ಝೌರೇಝ್

contributor

Editor - ಇಸ್ಮಾಯೀಲ್ ಝೌರೇಝ್

contributor

Similar News