ಸೌದಿ ಮೇಲೆ ನಡೆದ ದಾಳಿ ಯುದ್ಧ: ಅಮೆರಿಕ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ

Update: 2019-09-19 17:29 GMT

 ಜಿದ್ದಾ, ಸೆ. 19: ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ನಡೆದ ದಾಳಿಯು ಯುದ್ಧವಾಗಿದೆ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಬುಧವಾರ ಹೇಳಿದ್ದಾರೆ.

ಅವರ ಹೇಳಿಕೆಯು ಅತ್ಯಂತ ಸ್ಫೋಟಕ ಸ್ಥಿತಿಯಲ್ಲಿರುವ ಕೊಲ್ಲಿ ವಲಯದಲ್ಲಿ ಬೃಹತ್ ಪ್ರಮಾಣದ ಸಂಘರ್ಷವೊಂದನ್ನು ಹುಟ್ಟು ಹಾಕುವ ಅಪಾಯವನ್ನು ಒಡ್ಡಿದೆ.

ಶನಿವಾರ ಮುಂಜಾನೆ ಸೌದಿ ಅರೇಬಿಯದ ಅರಾಮ್ಕ ತೈಲ ಸ್ಥಾವರಗಳ ಮೇಲೆ ನಡೆದ ಸರಣಿ ದಾಳಿಗಳಿಂದಾಗಿ ಸೌದಿ ಅರೇಬಿಯದ ತೈಲ ಉತ್ಪಾದನೆ ಪ್ರಮಾಣ ಅರ್ಧಕ್ಕೆ ಇಳಿದಿದೆ.

ಸೌದಿ ಅರೇಬಿಯದ ಜಿದ್ದಾ ನಗರದಲ್ಲಿ ಇಳಿಯುವ ಮುನ್ನ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಂಪಿಯೊ, ‘‘ಇದು ಇರಾನ್ ನಡೆಸಿದ ದಾಳಿಯಾಗಿದೆ ಹಾಗೂ ಇದು ಯುದ್ಧ ಕೃತ್ಯವಾಗಿದೆ’’ ಎಂದು ಹೇಳಿದರು.

ಅದೇ ವೇಳೆ, ಸೌದಿ ಅರೇಬಿಯವು ಬುಧವಾರ ‘25 ಡ್ರೋನ್‌ಗಳು ಮತ್ತು ಕ್ರೂಸ್ ಕ್ಷಿಪಣಿಗಳ ಚೂರು’ಗಳನ್ನು ಒಳಗೊಂಡ ‘ಪುರಾವೆ’ಗಳನ್ನು ಪ್ರದರ್ಶಿಸಿದೆ ಹಾಗೂ ಈ ದಾಳಿಯನ್ನು ಇರಾನ್ ನಡೆಸಿದೆ ಎಂದು ಹೇಳಿದೆ.

‘‘ದಾಳಿಯನ್ನು ಉತ್ತರದಿಂದ ನಡೆಸಲಾಗಿದೆ ಹಾಗೂ ಅದರ ಸಂಪೂರ್ಣ ಪ್ರಾಯೋಜಕತ್ವವನ್ನು ನಿರ್ವಿವಾದವಾಗಿ ಇರಾನ್ ವಹಿಸಿಕೊಂಡಿದೆ’’ ಎಂದು ಸೌದಿ ಅರೇಬಿಯದ ರಕ್ಷಣಾ ಸಚಿವಾಲಯದ ವಕ್ತಾರ ತುರ್ಕಿ ಅಲ್-ಮಾಲಿಕಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News