ವಾಹನ ಮಾಲಿನ್ಯ ತಪಾಸಣೆಗೆ ಫುಲ್ ಡಿಮ್ಯಾಂಡ್: ಕಾರಣ ಗೊತ್ತೇ?

Update: 2019-09-20 04:20 GMT

ಹೊಸದಿಲ್ಲಿ, ಸೆ.20: ಪರಿಷ್ಕೃತ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಮೊದಲ ಹದಿನೆಂಟು ದಿನಗಳಲ್ಲಿ ವಾಹನ ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ, "ಮಾಲಿನ್ಯ ನಿಯಂತ್ರಣದಲ್ಲಿದೆ" ಎಂಬ ಪ್ರಮಾಣಪತ್ರ ಪಡೆಯಲು ವಾಹನ ಚಾಲಕರು ಸಾಲುಗಟ್ಟಿ ನಿಂತಿದ್ದಾರೆ.

ಹನ್ನೊಂದು ರಾಜ್ಯಗಳಿಂದ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಮಾಲಿನ್ಯ ನಿಯಂತ್ರಣ ಪಡೆದ ವಾಹನಗಳಿಗೆ ಹೋಲಿಸಿದರೆ ಬಿಹಾರ ಹಾಗೂ ಉತ್ತರಾಖಂಡದಲ್ಲಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ನೀಡಿಕೆಯಲ್ಲಿ ಗರಿಷ್ಠ ಅಂದರೆ ಒಂಬತ್ತು ಪಟ್ಟು ಹೆಚ್ಚಳ ಕಂಡುಬಂದಿದೆ. ಉತ್ತರ ಪ್ರದೇಶ ಹಾಗೂ ಗುಜರಾತ್‌ನಲ್ಲಿ ಮೂರು ಪಟ್ಟು ಹೆಚ್ಚಳ ಕಂಡುಬಂದಿದೆ. ದೆಹಲಿಯ ಅಧಿಕೃತ ಅಂಕಿಅಂಶಗಳು ಲಭ್ಯವಿಲ್ಲದಿದ್ದರೂ, ಸಾರಿಗೆ ಇಲಾಖೆ ಮೂಲಗಳ ಪ್ರಕಾರ, ಹೊಸ ಅರ್ಜಿಗಳಲ್ಲಿ ಮೂರು ಪಟ್ಟು ಏರಿಕೆ ಕಂಡುಬಂದಿದೆ.

ಹೊಸದಾಗಿ ಜಾರಿಗೆ ಬಂದಿರುವ ಅಧಿಕ ದಂಡ ಹಾಗೂ ಶಿಕ್ಷೆ, ಹೇಗೆ ಜನಸಾಮಾನ್ಯರನ್ನು ಕಾನೂನು ಅನುಸರಿಸುವಂತೆ ಮಾಡುತ್ತದೆ ಎನ್ನುವುದನ್ನು ಇದು ಸೂಚಿಸುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. "ಅಧಿಕ ದಂಡ ವಿಧಿಸುವ ಉದ್ದೇಶ ಸರ್ಕಾರಕ್ಕೆ ಹೆಚ್ಚಿನ ಆದಾಯ ತರುವುದಲ್ಲ; ಕಾನೂನಿಗೆ ಸಂಬಂಧಿಸಿದಂತೆ ಜನರಲ್ಲಿ ಹೆಚ್ಚಿನ ಭಯ ಹುಟ್ಟಿಸುವುದಷ್ಟೇ ಇದರ ಉದ್ದೇಶ" ಎಂದು ಭಾರತೀಯ ಸಾರಿಗೆ ನಿಗಮದ "ಸೇಫ್ ಸೇಫರ್" ಅಭಿಯಾನ ಉದ್ಘಾಟಿಸಿ ಮಾತನಾಡುವ ವೇಳೆ ಅವರು ಸ್ಪಷ್ಟಪಡಿಸಿದರು.
ಇದುವರೆಗೆ ಐದು ರಾಜ್ಯಗಳು ಮಾತ್ರ ಪರಿಷ್ಕೃತ ದಂಡ ವ್ಯವಸ್ಥೆಯ ಬಗ್ಗೆ ಅಧಿಸೂಚನೆ ಹೊರಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News