ಪಡುಬಿದ್ರಿ: ಅಲ್ ಫಲಾಹ್ ಕ್ಲಿನಿಕ್‍ಗೆ ಶಿಲಾನ್ಯಾಸ

Update: 2019-09-20 12:23 GMT

ಪಡುಬಿದ್ರಿ: ಬೆಳಪು ಜವನರಕಟ್ಟೆಯಲ್ಲಿ ಸಾರ್ವಜನಿಕರ ಉಚಿತ ಸೇವೆಗಾಗಿ ಜಮೀಯತುಲ್ ಫಲಾಹ್ (ರಿ) ಕಾಪು ತಾಲ್ಲೂಕು ಸಮಿತಿ ನಿರ್ಮಿಸಲು ಉದ್ದೇಶಿಸಿರುವ ಅಲ್ ಫಲಾಹ್ ಕ್ಲಿನಿಕ್‍ಗೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿ, ಬೆಳಪು ಗ್ರಾಮದ ಜನರಿಗೆ ಅಗತ್ಯವಾಗಿರುವ ಜನರಲ್ ಕ್ಲಿನಿಕ್ ಮತ್ತು ಮೆಡಿಕಲ್ ಸೆಂಟರನ್ನು ಪ್ರಾರಂಭಿಸುವ ಜಮೀಯತ್ತುಲ್ ಫಲಾಹ್‍ನ ಯೋಜನೆಗೆ ಬೆಳಪು ಗ್ರಾಮ ಪಂಚಾಯತ್ ಸಂಪೂರ್ಣ ಸಹಕಾರ ನೀಡಲಿದೆ. ಈ ಕ್ಲಿನಿಕ್‍ನ್ನು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಬೇಕಾದ ಸ್ಥಳಾವಕಾಶವನ್ನೂ ಪಂಚಾಯತ್ ನೀಡಲು ಪ್ರಯತ್ನಿಸಲಾಗುವುದು ಎಂದರು.

ಜಮೀಯತ್ತುಲ್ ಫಲಾಹ್‍ನ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ. ಶಾಹುಲ್ ಹಮೀದ್ ಮಾತನಾಡಿ, ಕಳೆದ 30 ವರ್ಷಗಳಿಂದ ಶಿಕ್ಷಣ ಮತ್ತು ಆರೋಗ್ಯದ ಚಿಂತನೆಯೊಂದಿಗೆ ಮುನ್ನಡೆಯುತ್ತಿರುವ ನಮ್ಮ ಸಂಸ್ಥೆಯ ವತಿಯಿಂದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಡೇ ಕೇರ್ ಸೆಂಟರ್ ಮಾದರಿಯಲ್ಲಿ ಫಲಾಹ್ ಕ್ಲಿನಿಕ್‍ನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಗ್ರಾಮದ ಎಲ್ಲಾ ವರ್ಗದ ಜನರಿಗೂ ಉಚಿತ ಸೇವೆಯನ್ನು ಒದಗಿಸುವ ಉದ್ದೇಶ ಹೊಂದಲಾಗಿದ್ದು, ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಗ್ರಾಮದ ಜನರ ಉಪಯೋಗಕ್ಕಾಗಿ ಒದಗಿಸಲಾಗುವುದು ಎಂದರು. 

ಅನಿವಾಸಿ ಭಾರತೀಯ ಉದ್ಯಮಿ ಮಹಮ್ಮದ್ ಅಸ್ಲಂ ಖಾಝಿ, ಶಭೀ ಅಹಮದ್ ಖಾಝಿ, ಜಮೀಯತ್ತುಲ್ ಫಲಾಹ್‍ನ ಕೇಂದ್ರ ಸಮಿತಿಯ ಕೋಶಾಧಿಕಾರಿ ಇಬ್ರಾಹಿಂ ಕೋಡಿಜಾಲ್, ಮಂಗಳೂರು ತಾಲೂಕು ಕಾರ್ಯದರ್ಶಿ ಮಹಮ್ಮದ್ ಹಾಜಿ, ಕೊಂಬಗುಡ್ಡೆ ಮಸೀದಿಯ ಖತೀಬ್ ಮೌಲಾನಾ ಪರ್ವೇಜ್ ಆಲಂ, ಬೆಳಪು ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ದೇವಾಡಿಗ, ಶರತ್ ಕುಮಾರ್, ಮಲ್ಲಾರು ಗ್ರಾಮ ಪಂಚಾಯಿತಿ  ಮಾಜಿ ಅಧ್ಯಕ್ಷ ಮಹಮದ್ ಸಾದಿಕ್ ಮೊದಲಾದವರು ಉಪಸ್ಥಿತರಿದ್ದರು. 

ಕಾಪು ತಾಲೂಕು ಜಮೀಯತ್ತುಲ್ ಫಲಾಹ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಆದಮ್ ಸ್ವಾಗತಿಸಿದರು. ಕೋಶಾಧಿಕಾರಿ ಮುಶ್ತಾಕ್ ಇಬ್ರಾಹಿಂ ಸ್ವಾಗತಿಸಿದರು. ಮಹಮ್ಮದ್ ಇಕ್ಬಾಲ್ ವಂದಿಸಿದರು. ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News