ಸೆ.25: ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

Update: 2019-09-20 13:12 GMT

ಮಂಗಳೂರು, ಸೆ.20: ಮೋಟಾರು ವಾಹನ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಜಿಲ್ಲೆಯ ರಸ್ತೆಗಳ ಅವ್ಯವಸ್ಥೆಗಳನ್ನು ಖಂಡಿಸಿ ದ.ಕ.ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸೆ.25ರಂದು ಸಂಯುಕ್ತ ಪ್ರತಿಭಟನೆ ನಡೆಯಲಿದೆ ಎಂದು ಮೋಟಾರು ವಾಹನ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಸುನೀಲ್ ಕುಮಾರ್ ಬಜಾಲ್ ತಿಳಿಸಿದರು.

ಶುಕ್ರವಾರ ನಗರದ ಖಾಸಗಿ ಹೊಟೇಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರವು ಸೆ.1ರಿಂದ ಜಾರಿಗೊಳಿಸಿದ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಯು ಚಾಲಕ ವರ್ಗಕ್ಕೆ ಮಾರಕವಾಗಿ ಪರಿಣಮಿಸಿದೆ. ಈ ಕಾಯ್ದೆಯನ್ನು ಹಿಂಪಡೆಯಬೇಕು ಹಾಗೂ ಜಿಲ್ಲಾದ್ಯಂತದ ರಸ್ತೆಗಳ ಅವ್ಯವಸ್ಥೆ, ಅಕ್ರಮ ಟೋಲ್ ಸಂಗ್ರಹ, ಪಾರ್ಕಿಂಗ್ ಅವ್ಯವಸ್ಥೆ, ಟೋಯಿಂಗ್ ಹೆಸರಲ್ಲಿ ಸುಲಿಗೆ ಇತ್ಯಾದಿಯಿಂದ ಜಿಲ್ಲೆಯ ಜನತೆ ತೀವ್ರ ಆಕ್ರೋಶಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಸಮಾನ ಮನಸ್ಕ ಚಾಲಕರ ಹಾಗೂ ಸಾರ್ವಜನಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ. ಅದಕ್ಕೂ ಮೊದಲು ಮಂಗಳೂರು ಮಿನಿ ವಿಧಾನಸೌಧದಿಂದ ಡಿಸಿ ಕಚೇರಿಗೆ ರ್ಯಾಲಿ ನಡೆಯಲಿದೆ ಎಂದರು.

ರಸ್ತೆ ಸುರಕ್ಷತೆ ಹಾಗೂ ಜನಸಾಮಾನ್ಯರ ಪ್ರಾಣ ರಕ್ಷಣೆಗಾಗಿ ಈ ಮಸೂದೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಲಾಗುತ್ತದೆ. ಆದರೆ, ಜಿಲ್ಲೆಯ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆಗಳ ಅವ್ಯವಸ್ಥೆಯಿಂದಾಗಿ ಅದೆಷ್ಟೋ ಅಪಘಾತಗಳು ಸಂಭವಿಸಿ ಪ್ರಾಣಹಾನಿಗಳಾಗಿದೆ. ಅಲ್ಲದೆ ವಿಪರೀತ ದಂಡ ವಸೂಲಿಯ ಹೆಸರಲ್ಲಿ, ಸಣ್ಣಪುಟ್ಟ ತಪ್ಪುಗಳಾದರೂ ಚಾಲಕರಿಂದ ಕನಿಷ್ಟ 2,000ದಿಂದ ಗರಿಷ್ಠ 1 ಲಕ್ಷದವರೆಗೂ ದಂಡ ವಿಧಿಸಿರುವ ನಿದರ್ಶನಗಳು ನಡೆದಿದೆ. ಈ ಮಸೂದೆಯಿಂದ ರಿಕ್ಷಾ, ಕಾರು, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ, ಬಸ್, ಲಾರಿ, ಗೂಡ್ಸ್ ವಾಹನಗಳ ಚಾಲಕರು ಸಂಕಷ್ಟಕ್ಕೊಳಗಾಗಿದ್ದಾರೆ. ದ್ವಿಚಕ್ರ ವಾಹನ ಸಹಿತ ಖಾಸಗಿ ವಾಹನವನ್ನು ಹೊಂದಿರುವ ಮಧ್ಯಮ ಮತ್ತು ಸಾಮಾನ್ಯ ವರ್ಗದ ಜನತೆ ಭೀತಿಗೊಳಗಾಗಿದ್ದಾರೆ. ಪ್ರತಿಯೊಂದು ವಾಹನಕ್ಕೆ ಈಗಾಗಲೇ ಇನ್ಸೂರೆನ್ಸ್ ಪ್ರೀಮಿಯಂ ದರ ವಿಪರೀತವಾಗಿ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಆ ವಾಹನದ ಮೇಲಿರುವ ಕೇಸುಗಳ ಆಧಾರದಲ್ಲಿ ಇನ್ಸೂರೆನ್ಸ್ ಪ್ರೀಮಿಯಂ ದರವನ್ನು ನಿಗದಿಪಡಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಸುನೀಲ್ ಕುಮಾರ್ ಬಜಾಲ್ ಹೇಳಿದರು.

ಜನರ ಸುರಕ್ಷತೆಯ ಮುಖವಾಡದೊಂದಿಗೆ ಜಾರಿಗೊಳಿಸಿದ ಈ ಕಾಯ್ದೆಯು ಹಣ ಸಂಗ್ರಹದ ಗುರಿಯನ್ನು ಹೊಂದಿದೆ. ಇದು ದೇಶದ ಚಾಲಕ ವರ್ಗಕ್ಕೆ ಸಂಕಷ್ಟವನ್ನು ತಂದೊಡ್ಡಿದ್ದು, ಮುಂದಿನ ದಿನಗಳಲ್ಲಿ ಇಡೀ ಸಾರಿಗೆ ರಂಗವನ್ನು ಕಾರ್ಪೊರೇಟ್ ಕಂಪೆನಿಗಳಿಗೆ ವಹಿಸುವ ಹುನ್ನಾರವನ್ನು ಕೇಂದ್ರ ಸರಕಾರವು ಹೊಂದಿದೆ. ದ.ಕ. ಜಿಲ್ಲೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಗುಂಡ್ಯದಿಂದ ಬಿ.ಸಿ. ರೋಡ್ ಸಂಪರ್ಕಿಸುವ ಹೆದ್ದಾರಿಯನ್ನು ಚತುಷ್ಪಥಗೊಳಿಸಲು ಕಾಮಗಾರಿ ಆರಂಭಿಸಿ ಈಗ ಹಣಕಾಸಿನ ಕೊರತೆಯಿಂದ ಕೆಲಸ ಸ್ಥಗಿತಗೊಳಿಸಲಾಗಿದೆ. ಕನಿಷ್ಟ ಹೊಂಡ ಮುಚ್ಚಲೂ ಹಣ ಬಿಡುಗಡೆಯಾಗದೆ ರಸ್ತೆಗಳು ಗುಂಡಿಗಳಿಂದಲೇ ತುಂಬಿವೆ. ಕಾರ್ಕಳ, ನಂತೂರು ಮೇಲ್ದರ್ಜೆಗೇರಿಸುವ ಘೋಷಣೆ ಮಾತಿಗಷ್ಟೆ ಸೀಮಿತವಾಗಿದೆ. ಪಂಪ್‌ವೆಲ್ ಮೇಲ್ಸೇತುವೆ ಹತ್ತು ವರ್ಷಗಳ ನಂತರವೂ ಪೂರ್ಣಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಂತೂರು, ಸುರತ್ಕಲ್, ಹೆಜಮಾಡಿ ಹೆದ್ದಾರಿಯಲ್ಲಿ, ಹೆದ್ದಾರಿ ಪ್ರಾಧಿಕಾರವೇ ಟೋಲ್ ಸಂಗ್ರಹ ಮಾಡುತ್ತಿದ್ದರೂ, ರಸ್ತೆಗಳಲ್ಲಿ ವಾಹನ ಸಂಚಾರ ಅಸಾಧ್ಯ ಎಂಬಂತಾಗಿದೆ. ಹೊಂಡಗುಂಡಿಗಳ ರಸ್ತೆಯಲ್ಲಿ ವಾಹನ ಓಡಿಸಿ, ಸುಂಕ ಕಟ್ಟುವ ಅಸಹನೀಯ ಸ್ಥಿತಿ ವಾಹನ ಸವಾರರದ್ದಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದರು.

ಕೂಳೂರು ಸೇತುವೆ ದುರ್ಬಲಗೊಂಡು ಕುಸಿಯುವ ಭೀತಿ ಎದುರಿಸುತ್ತಿದ್ದರೂ, ಹೊಸ ಸೇತುವೆ ನಿರ್ಮಾಣದ ಯಾವ ಯೋಜನೆಯನ್ನೂ ಹೆದ್ದಾರಿ ಪ್ರಾಧಿಕಾರ ಹೊಂದಿಲ್ಲ. ಅದರಲ್ಲೂ ಸುರತ್ಕಲ್ ಟೋಲ್‌ಗೇಟ್ ಅಕ್ರಮವೆಂದು ಸ್ವತಃ ಹೆದ್ದಾರಿ ಪ್ರಾಧಿಕಾರವೇ ಒಪ್ಪಿ ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನಗೊಳಿಸುವ ತೀರ್ಮಾನವನ್ನು ಎರಡು ವರ್ಷದ ಹಿಂದೆ ತೆಗೆದುಕೊಂಡಿದ್ದರೂ ಇನ್ನೂ ತಾತ್ಕಾಲಿಕ ನೆಲೆಯ ಹೆಸರಿನಲ್ಲಿ ಟೋಲ್ ಸಂಗ್ರಹ ಜನರ ವಿರೋಧದ ನಡುವೆ ಬಲವಂತವಾಗಿ ನಡೆಸಲಾಗುತ್ತಿದೆ. ನಗರದಲ್ಲಿ ಟೋಯಿಂಗ್ ಹೆಸರಿನಲ್ಲಿ ವಾಹನ ಸವಾರರನ್ನು ಅಕ್ಷರಶಃ ಸುಲಿಗೆ ಮಾಡಲಾಗುತ್ತಿದೆ. ಪಾರ್ಕಿಂಗ್‌ಗೆ ಸ್ಥಳವಿಲ್ಲದೆ ಕಟ್ಟಿರುವ ಕಟ್ಟಡಗಳೇ ತುಂಬಿರುವ ನಗರದಲ್ಲಿ ದ್ವಿಚಕ್ರ ವಾಹನ ಸವಾರರ ವಾಹನಗಳನ್ನು ಟೋಯಿಂಗ್ ವಾಹನದಲ್ಲಿ ಎತ್ತಿಕೊಂಡು ಹೋಗಿ ಸಾವಿರಾರು ರೂಪಾಯಿ ದಂಡ ವಿಧಿಸಲಾಗುತ್ತಿದೆ. ಇಂತಹ ಅನ್ಯಾಯವನ್ನು ಪ್ರಶ್ನಿಸದಿದ್ದರೆ ಸುಲಿಗೆಯೇ ನ್ಯಾಯಬದ್ದವಾಗಿ ಬಿಡುತ್ತದೆ. ಆದ್ದರಿಂದ ಚಾಲಕ ವಿರೋಧಿ ಮೋಟಾರ್ ವಾಹನ ಕಾಯ್ದೆಯಿಂದಾಗಿ ಹಾಗೂ ರಸ್ತೆಗಳ ಅವ್ಯವಸ್ಥೆಗಳಿಂದ ಕಂಗೆಟ್ಟ ಚಾಲಕರು, ಸಾರ್ವಜನಿಕರು, ವಿದ್ಯಾರ್ಥಿ ಯುವಜನರು ಪಕ್ಷಭೇದ ಮರೆತು ಈ ನ್ಯಾಯಯುತ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಮುನೀರ್ ಕಾಟಿಪಳ್ಳ ಮನವಿ ಮಾಡಿದರು.

ಕೇಂದ್ರ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ, ಐಎನ್‌ಟಿಯುಸಿ, ಕಾರ್ಮಿಕ ಪರಿಷತ್ ದ.ಕ. ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಶನ್, ದ.ಕ. ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಡ್ರೈವರ್ಸ್‌ ಆಂಡ್ ಓನರ್ಸ್ ಅಸೋಸಿಯೇಶನ್, ಗೂಡ್ಸ್ ಟೆಂಪೋ ಚಾಲಕರ ಮತ್ತು ಮಾಲಕರ ಸಂಘ ಸುರತ್ಕಲ್, ತ್ರಿಚಕ್ರ ಟೆಂಪೊ ಮತ್ತು ಟಾಟಾ ಏಸ್ ವಾಹನ ಚಾಲಕರ ಮತ್ತು ಮಾಲಕರ ಸಂಘ (ರಿ) ಸುರತ್ಕಲ್, ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್‌ ಯೂನಿಯನ್ (ರಿ), ಮಂಗಳೂರು ಮಹಾನಗರ ಆಟೋರಿಕ್ಷಾ ಚಾಲಕರ ಸಂಘ, ದ.ಕ. ಜಿಲ್ಲಾ ಕಾರು ಚಾಲಕರ ಸಂಘ, ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್‌ ಸಂಘಟನೆ, ಡಿವೈಎಫ್‌ಐ, ಎಸ್‌ಎಫ್‌ಐ, ಜಿಲ್ಲಾ ಯುವ ಕಾಂಗ್ರೆಸ್, ಜಿಲ್ಲಾ ಯುವ ಜಾತ್ಯತೀತ ಜನತಾದಳ, ಬಸ್ ಮಾಲಕರ ಸಂಘ, ದಲಿತ ಸಂಘರ್ಷ ಸುತಿ, ದಕ್ಕೆ ಮೀನು ಲಾರಿ ಚಾಲಕರ ಸಂಘ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ದ.ಕ.ಜಿಲ್ಲಾ ಕಾರ್ಮಿಕ ಪರಿಷತ್ ಅಧ್ಯಕ್ಷ ಐವನ್ ಡಿಸೋಜ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾವ್, ಸಾಮಾಜಿಕ ಹೋರಾಟಗಾರ ಆಲಿ ಹಸನ್, ಐಎನ್‌ಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ, ದ.ಕ. ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಚಾಲಕರ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಯುವ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಕರ್ನಾಟಕ ಟ್ಯಾಕ್ಸಿ ಚಾಲಕರ ಸಂಘದ ಮುಖಂಡ ಇಕ್ಬಾಲ್, ಗೂಡ್ಸ್ ಟೆಂಪೋ ಚಾಲಕರ ಮುಖಂಡರಾದ ಜಾನಿ ಡಿಸೋಜ, ಪ್ರಕಾಶ್ ಡಿಸೋಜ, ಆಟೋ ರಿಕ್ಷ ಚಾಲಕರ ಮುಖಂಡ ಕೃಷ್ಣಪ್ಪಗೌಡ, ಸ್ಟ್ಯಾನ್ಲಿ ನೊರೊನ್ಹಾ, ಅನಿಲ್ ಕುಮಾರ್, ಧಕ್ಕೆ ಮೀನು ಲಾರಿ ಚಾಲಕರ ಮುಖಂಡ ಇಸ್ಮಾಯೀಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News