ಕಚ್ಚಿಮೆಮನ್ ಮಸೀದಿಯ ವಕ್ಫ್ ಆಸ್ತಿ ಅತಿಕ್ರಮಣದ ಆರೋಪ: ಎಸ್‌ಡಿಪಿಐ ಪ್ರತಿಭಟನೆ

Update: 2019-09-20 13:20 GMT

ಮಂಗಳೂರು, ಸೆ.19:ನಗರದ ಬಂದರ್‌ನ ಗೋಳಿಕಟ್ಟೆ ಬಜಾರ್ ಬಳಿಯ ಕಚ್ಚಿಮೆಮನ್ ಮಸೀದಿಗೆ ಸಂಬಂಧಿಸಿದ ವಕ್ಫ್ ಆಸ್ತಿಯನ್ನು ರಾಜಕಾರಣಿಯೊಬ್ಬರು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಶುಕ್ರವಾರ ದ.ಕ.ಜಿಲ್ಲಾಧಿಕಾರಿಯ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಸರ್ವೆ ನಂಬ್ರ 670/1ರ 69 ಸೆಂಟ್ಸ್ ಸ್ಥಳವು ವಕ್ಫ್ ಆಸ್ತಿಯಾಗಿದ್ದು, ಕಚ್ಚಿಮೆಮನ್ ಮಸೀದಿಯ ಮುತವಲ್ಲಿ ನಯೀಂ ಪಟೇಲ್ ಇದರಲ್ಲಿ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪವಿಲ್ಲ ಎಂದು ಅನಧಿಕೃತವಾಗಿ ಅನುಮತಿ ನೀಡಿದ ಕಾರಣ ರಾಜಕಾರಣಿಯೊಬ್ಬರು ಅಕ್ರಮವಾಗಿ ಕಟ್ಟಡ ಕಟ್ಟಿ ಅದನ್ನು ಮಾರಾಟ/ಬಾಡಿಗೆಗೆ ಕೊಡಲು ಸಿದ್ಧತೆ ನಡೆಸಿದ್ದಾರೆ. ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ವಕ್ಫ್ ಬೋರ್ಡ್‌ನಲ್ಲಿ ತನಿಖೆ ನಡೆದು ಅತಿಕ್ರಮಣ ನಡೆದಿರುವುದು ಸಾಬೀತಾಗಿದೆ. ಆದಾಗ್ಯೂ ಈ ರಾಜಕಾರಣಿಯು ಮನಪಾದಿಂದ ಕಟ್ಟಡ ಪರಿಪೂರ್ಣತೆಯ ಪತ್ರ ಮತ್ತು ಮೆಸ್ಕಾಂನಿಂದ ಶಾಶ್ವತ ವಿದ್ಯುಚ್ಛಕ್ತಿ ಸೌಲಭ್ಯ ಪಡೆದು ಉದ್ಘಾಟನೆಗೆ ಸಿದ್ಧತೆ ನಡೆಸಿದ್ದಾರೆ. ಹಾಗಾಗಿ ಈ ಆಸ್ತಿಯನ್ನು ವಕ್ಫ್ ಇಲಾಖೆಯು ಸ್ವಾಧೀನಪಡಿಸಿಕೊಳ್ಳಬೇಕು, ಕಟ್ಟಡ ಪರವಾನಿಗೆಯ ಅನುಮತಿ ಪತ್ರವನ್ನು ರದ್ದುಗೊಳಿಸಬೇಕು, ಜಮೀನು ಅತಿಕ್ರಮಣಕ್ಕೆ ಸಹಕರಿಸಿದ ಮುತವಲ್ಲಿ ನಯೀಮ್ ಪಟೇಲ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ಕಚ್ಚಿಮೆಮನ್ ಮಸೀದಿಗೆ ಹೊಸ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್, ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಸುಹೈಲ್ ಖಾನ್, ಜಿಲ್ಲಾ ಸಮಿತಿಯ ಸದಸ್ಯ ಮುನೀಬ್ ಬೆಂಗರೆ, ಕುದ್ರೋಳಿ ವಾರ್ಡ್ ಸಂಭಾವ್ಯ ಎಸ್‌ಡಿಪಿಐ ಅಭ್ಯರ್ಥಿ ಮುಝೈರ್ ಕುದ್ರೋಳಿ, ಬಜಾಲ್ ವಾರ್ಡ್ ಸಂಭಾವ್ಯ ಅಭ್ಯರ್ಥಿ ಕಬೀರ್ ಬಜಾಲ್, ಬಂದರ್ ವಾರ್ಡ್ ಸಂಭಾವ್ಯ ಅಭ್ಯರ್ಥಿ ಮುಹಮ್ಮದ್ ಇಕ್ಬಾಲ್, ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಉಳ್ಳಾಲ ನಗರಸಭೆಯ ಸದಸ್ಯ ಅಕ್ಬರ್ ಅಲಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News